ADVERTISEMENT

ಆಂಗ್ಲ ಮಾಧ್ಯಮಕ್ಕೆ ವಿರೋಧ: ‘ದೋಸ್ತಿ’ಗಳ ಮಧ್ಯದ ಸಮನ್ವಯ ಕೊರತೆ ಬಹಿರಂಗ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 19:46 IST
Last Updated 27 ಡಿಸೆಂಬರ್ 2018, 19:46 IST
   

ಬೆಂಗಳೂರು:ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 1,000 ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆ ಮೂಲಕ, ಸಮ್ಮಿಶ್ರ ಸರ್ಕಾರದ ನೀತಿ–ನಿಲುವುಗಳ ವಿಚಾರದಲ್ಲಿ ‘ದೋಸ್ತಿ’ಗಳ (ಜೆಡಿಎಸ್‌– ಕಾಂಗ್ರೆಸ್‌) ಮಧ್ಯೆ ಸಮನ್ವಯ ಇಲ್ಲದಿರುವುದು ಮತ್ತೊಮ್ಮೆ ಬಹಿರಂಗವಾಗಿದೆ.

ಹಣಕಾಸು ಸಚಿವರೂ ಆಗಿರುವ ಕುಮಾರಸ್ವಾಮಿ ಜುಲೈ 5ರಂದು ಮಂಡಿಸಿದ್ದ ಬಜೆಟ್‌ನಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಈ ಪ್ರಸ್ತಾವಕ್ಕೆ ಇದುವರೆಗೂ ವಿರೋಧ ವ್ಯಕ್ತಪಡಿಸದ ಸಿದ್ದರಾಮಯ್ಯ, ಮುಖ್ಯಮಂತ್ರಿಯ ನಡೆಯನ್ನು ಏಕಾಏಕಿ ಪ್ರಶ್ನಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿಯೂ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುವ ತಮ್ಮ ಇಂಗಿತವನ್ನು ಪುನರುಚ್ಚರಿಸಿದ್ದರು. ಅಷ್ಟೇ ಅಲ್ಲ, ಅದಕ್ಕೆ ಸಮರ್ಥನೆಯನ್ನೂ ನೀಡಿದ್ದರು. ಅದಕ್ಕೆ ಸಾಂಸ್ಕೃತಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಮುಖ್ಯಮಂತ್ರಿಯ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಎಸ್.ಎಲ್.ಬೈರಪ್ಪ, ಚಂದ್ರಶೇಖರ ಪಾಟೀಲ(ಚಂಪಾ), ಸಿದ್ದಲಿಂಗಯ್ಯ ಮೊದಲಾದವರು, ಗೋಕಾಕ ಮಾದರಿ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದರು.

ಕನ್ನಡ ಪುಸ್ತಕ ಪ್ರಾಧಿಕಾರ ಬಾದಾಮಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇಂಗ್ಲಿಷ್‌ ಶಾಲೆ ಆರಂಭಿಸುವ ಸರ್ಕಾರದ ನಿಲುವನ್ನು ವಿರೋಧಿಸಿದ್ದರು. ಬಳಿಕ ಇದೇ ವಿಷಯವನ್ನು ಟ್ವೀಟ್‌ ಮಾಡಿರುವ ಅವರು, ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ಉಳಿಯಬೇಕು. ಈ ಬಗ್ಗೆ ಕುಮಾರಸ್ವಾಮಿ ಜತೆ ಚರ್ಚೆ ಮಾಡುತ್ತೇನೆ’ ಎಂದು ಪ್ರತಿಪಾದಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಘೋಷಿಸಿರುವ ಕೆಲವು ಯೋಜನೆಗಳಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ನಡುವಿನ ಭಿನ್ನಾಭಿಪ್ರಾಯ ಮುಂದುವರೆದಿವೆ. ರಾಜಕೀಯ ಕಾರಣಗಳಿಂದ ಮುಖ್ಯಮಂತ್ರಿಯ ಹೊಸ ಯೋಜನೆಗಳನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಸಾಲ ಮನ್ನಾ, ಅಕ್ಕಿ ಕಡಿತಕ್ಕೂ ವಿರೋಧ
ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಹೊಸ ಬಜೆಟ್‌ ಮಂಡಿಸಲು ಕುಮಾರಸ್ವಾಮಿ ಮುಂದಾದಾಗ ವಿರೋಧ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ, ಪೂರಕ ಅಂದಾಜು ಮಂಡಿಸಲಿ ಎಂದು ಸಲಹೆ ನೀಡಿದ್ದರು.

ರಾಹುಲ್ ಗಾಂಧಿ ಮಧ್ಯ ಪ್ರವೇಶದ ಬಳಿಕ ಈ ಸಮಸ್ಯೆ ಇತ್ಯರ್ಥವಾಗಿತ್ತು. ಹಿಂದಿನ ಸರ್ಕಾರದ ಎಲ್ಲ ಯೋಜನೆಗಳನ್ನು ಮುಂದುವರಿಸುವುದಾಗಿ ಬಜೆಟ್‌ನಲ್ಲಿ ಪ್ರತಿಪಾದಿಸಿದ್ದ ಕುಮಾರಸ್ವಾಮಿ ಈ ಗೊಂದಲಕ್ಕೆ ತೆರೆ ಎಳೆದಿದ್ದರು.

ತಮ್ಮ ಬಜೆಟ್‌ನಲ್ಲಿ ಕುಮಾರಸ್ವಾಮಿ, ಸಾಲ ಮನ್ನಾ ಮತ್ತು ‘ಅನ್ನಭಾಗ್ಯ’ದ ಅಕ್ಕಿ ಕಡಿತ ಪ್ರಸ್ತಾಪಿಸಿದ್ದರು. ಅವೆರಡಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ, ತಮ್ಮ ಸರ್ಕಾರದ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಲಾಗಿದ್ದು, ಈ ಬಾರಿ ಸಾಲ ಮನ್ನಾ ಬೇಡ ಎಂದು ಅಪಸ್ವರ ಎತ್ತಿದ್ದರು. ಅವರ ಮನವೊಲಿಸುವಲ್ಲಿ ಸಫಲರಾಗಿದ್ದರು.

* ಕನ್ನಡ ಭಾಷೆ ಕಲಿಕೆ ಮತ್ತು ಕನ್ನಡ ಮಾಧ್ಯಮದ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು.‌ ನಾನು ಹೈಸ್ಕೂಲ್‌ವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತವನು. ನಾನೇನು ಪೆದ್ದನಾ?
–ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ (ಟ್ವೀಟ್‌)

ಸಿದ್ದರಾಮಯ್ಯ ವಿರುದ್ಧ ಹೊರಟ್ಟಿ ಕಿಡಿ
ಹುಬ್ಬಳ್ಳಿ:
‘ಸಿದ್ದರಾಮಯ್ಯ ಅವರಿಗೆ ಸರ್ಕಾರ ನಡೆಯಬಾರದೆಂಬ ಉದ್ದೇಶ ಇರುವಂತಿದೆ. ಅವರೇ ಮುಖ್ಯಮಂತ್ರಿ ಎನ್ನುವ ರೀತಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಈ ವರ್ತನೆ ಹೀಗೇ ಮುಂದುವರಿದರೆ ಸರ್ಕಾರ ಬಹಳ ದಿನ ನಡೆಯುವುದು ಅನುಮಾನ’ ಎಂದು ವಿಧಾನಪರಿಷತ್‌ನ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಅವರದ್ದೇ ಸರ್ಕಾರ ಎನ್ನುವ ನಿರ್ಧಾರಕ್ಕೆ ಬಂದಂತಿದೆ. ಜೆಡಿಎಸ್ ಬಗ್ಗೆ ಸ್ವಲ್ಪವೂ ಗೌರವ ಇದ್ದಂತಿಲ್ಲ. ಈ ಬಗ್ಗೆ ದೇವೇಗೌಡರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದರು.
‘ಹೊಂದಾಣಿಕೆ ಮಾಡಿಕೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಬಹಳ ಪ್ರಯತ್ನಿಸುತ್ತಿದ್ದಾರೆ. ಆದರೆ, ಅಧಿಕಾರ ನಡೆಸಲು ಕಾಂಗ್ರೆಸ್ ಬಿಡುತ್ತಿಲ್ಲ. ಮನಸ್ಸಿಲ್ಲ ಎಂದರೆ ಏಕೆ ಕಾಂಗ್ರೆಸ್ ಸರ್ಕಾರ ನಡೆಸಬೇಕು? ಒಪ್ಪಂದದ ರೀತಿ ಸರ್ಕಾರ ನಡೆಯಬೇಕು, ಇಲ್ಲವಾದರೆ ಅಗತ್ಯ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.