ADVERTISEMENT

ಬಿಜೆಪಿಯಿಂದ ಅಜ್ಞಾನದ ಮುತ್ತುಗಳು ಉದುರಿವೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 19:26 IST
Last Updated 26 ಅಕ್ಟೋಬರ್ 2020, 19:26 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ನಾನು ಮುಖ್ಯಮಂತ್ರಿಯಾಗಿದ್ದ 5 ವರ್ಷಗಳ ಅವಧಿಯಲ್ಲಿ ಜನರ ತಲೆ ಮೇಲೆ ಸಾಲದ ಹೊರೆ ಹೊರಿಸಿದ್ದೇನೆ ಎಂದು ರಾಜ್ಯ ಬಿಜೆಪಿ ಸರ್ಕಾರ ನಿರಾಧಾರ ಅಂಕಿ-ಅಂಶಗಳನ್ನು ಹುಟ್ಟುಹಾಕಿ, ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ಬಿಜೆಪಿ ತನ್ನ ನಾಯಕರಿಗೆ ದೇಶ, ಧರ್ಮ, ಸಮಾಜ ಒಡೆಯುವ ತರಬೇತಿಯನ್ನಷ್ಟೇ ನೀಡದೆ, ಆಡಳಿತ ಮತ್ತು ಆರ್ಥಿಕ ನಿರ್ವಹಣೆ ಬಗ್ಗೆಯೂ ಪಾಠ ಮಾಡಿದ್ದರೆ ಅವರಿಂದ ಇಂಥ ಅಜ್ಞಾನದ ಮುತ್ತುಗಳು ಉದುರಿ ಬೀಳುತ್ತಿರಲಿಲ್ಲ. ತರಬೇತಿದಾರರ ಕೊರತೆಯಿದ್ದರೆ ನಾನೇ ಬಂದು ಪಾಠ ಮಾಡ್ತೇನೆ’ ಎಂದಿದ್ದಾರೆ.

‘2008-09 ರಿಂದ 2013-14ರ ವರೆಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಲದ ಪ್ರಮಾಣ ಶೇ 212ರಷ್ಟು ಹೆಚ್ಚಿತ್ತು. 2013-14ರಿಂದ 2018-19ರ ನಮ್ಮ ಸರ್ಕಾರದ ಅವಧಿಯಲ್ಲಿ ಸಾಲದ ಪ್ರಮಾಣ ಹೆಚ್ಚಿದ್ದು ಕೇವಲ ಶೇ 65 ರಷ್ಟು ಮಾತ್ರ. ಹಿಂದಿನ ಅವಧಿಯ ಸಾಲ ಸೇರಿಸಿ ರಾಜ್ಯದ ಒಟ್ಟು ಸಾಲದ ಪ್ರಮಾಣ 2008-09 ರಿಂದ 2013-14ರ ಅವಧಿಯಲ್ಲಿ ಶೇ 94.18ರಷ್ಟು ಹೆಚ್ಚಿದ್ದರೆ, 2013-14ರಿಂದ 2018-19ರ ಅವಧಿಯಲ್ಲಿ ಹೆಚ್ಚಿದ್ದು ಕೇವಲ ಶೇ 78.19ರಷ್ಟು ಮಾತ್ರ’ ಎಂದೂ ಹೇಳಿದ್ದಾರೆ.

ADVERTISEMENT

‘ಪ್ರಸಕ್ತ ಸಾಲಿನ ಬಜೆಟ್ ಅಂದಾಜಿನ ಪ್ರಕಾರ ಸಾಲ ₹ 53,000 ಕೋಟಿ. ಕೊರೊನಾದಿಂದಾದ ಆದಾಯ ನಷ್ಟ ತುಂಬಲು ಹೆಚ್ಚುವರಿ ₹ 33,000 ಕೋಟಿ ಸಾಲದ ಜೊತೆ, ಜಿಎಸ್‌ಟಿ ಪರಿಹಾರ ಭರಿಸಲು ಮತ್ತೆ ₹ 12,000 ಕೋಟಿ ಸಾಲ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಒಂದೇ ವರ್ಷದಲ್ಲಿ ಸಾಲದ ಮೊತ್ತ ದುಪ್ಪಟ್ಟು ಮಾಡಿರುವುದು ಬಿಜೆಪಿಯ ಸಾಧನೆ’ ಎಂದೂ ಟೀಕಿಸಿದ್ದಾರೆ.

‘ರಾಜ್ಯದ ವಿತ್ತೀಯ ಕೊರತೆ ನಮ್ಮ ಆಂತರಿಕ ಉತ್ಪನ್ನದ ಶೇ 3 ನ್ನು ಮೀರಬಾರದು ಎಂದು ವಿತ್ತೀಯ ಹೊಣೆಗಾರಿಕೆ ಕಾಯ್ದೆ ಹೇಳಿದೆ. ಮುಖ್ಯಮಂತ್ರಿಯಾಗಿ ನಾನು ಮಂಡಿಸಿದ್ದ ಆರು ಬಜೆಟ್‌ಗಳಲ್ಲಿ ಈ ಮಿತಿಯನ್ನು ಮೀರಿರಲಿಲ್ಲ. ನನ್ನ ಕೊನೆಯ ಬಜೆಟ್‌ನಲ್ಲಿ ಈ ಮಿತಿ ಶೇ 2.49 ರಷ್ಟಿತ್ತು’ ಎಂದಿದ್ದಾರೆ.

‘ಬಿಜೆಪಿ ಸರ್ಕಾರ ಮಿತಿಯನ್ನು ಶೇ 5ಕ್ಕೆ ಏರಿಕೆ ಮಾಡುವ ನಿಲುವು ತೆಗೆದುಕೊಂಡಿದ್ದು, ಇದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ’ ಎಂದೂ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.