ADVERTISEMENT

ಧರ್ಮ ಒಡೆಯುವ ಕೆಲಸ ಮಾಡಿಲ್ಲ: ಸಿದ್ದರಾಮಯ್ಯ

ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 17:01 IST
Last Updated 11 ನವೆಂಬರ್ 2018, 17:01 IST
ಗದುಗಿನ ತೋಂಟದಾರ್ಯ ಮಠದಲ್ಲಿ ಭಾನುವಾರ ನಡೆದ ಸಿದ್ಧಲಿಂಗ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಶಾಸಕ ಸಿದ್ದರಾಮಯ್ಯ ಉದ್ಘಾಟಿಸಿದರು. ತೋಂಟದ ನಿಜಗುಣಪ್ರಭು ಸ್ವಾಮೀಜಿ,ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ,ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ತೋಂಟದ ಸಿದ್ಧರಾಮ ಸ್ವಾಮೀಜಿ, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಎಚ್‌.ಕೆ ಪಾಟೀಲ, ಗದಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌.ಪಾಟೀಲ ಇದ್ದಾರೆ.
ಗದುಗಿನ ತೋಂಟದಾರ್ಯ ಮಠದಲ್ಲಿ ಭಾನುವಾರ ನಡೆದ ಸಿದ್ಧಲಿಂಗ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಶಾಸಕ ಸಿದ್ದರಾಮಯ್ಯ ಉದ್ಘಾಟಿಸಿದರು. ತೋಂಟದ ನಿಜಗುಣಪ್ರಭು ಸ್ವಾಮೀಜಿ,ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ,ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ತೋಂಟದ ಸಿದ್ಧರಾಮ ಸ್ವಾಮೀಜಿ, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಎಚ್‌.ಕೆ ಪಾಟೀಲ, ಗದಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌.ಪಾಟೀಲ ಇದ್ದಾರೆ.   

ಗದಗ:‘ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ, ಧರ್ಮ ಒಡೆಯುವ ಕೆಲಸವನ್ನು ಮಾಡಿಲ್ಲ’ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಭಾನುವಾರ ಗದುಗಿನ ತೋಂಟದಾರ್ಯ ಮಠದಲ್ಲಿ, ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಲಿಂಗಾಯತ ಹಾಗೂ ವೀರಶೈವ ಲಿಂಗಾಯತರಿಗೆ (ಬಸವ ತತ್ವವನ್ನು ನಂಬುವ) ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನಿಡಬೇಕು ಎಂದು ಕೇಂದ್ರಕ್ಕೆ ಶಿಫಾರಸು ಮಾಡಿದರೆ, ಅದು ಧರ್ಮ ಒಡೆಯುವ ಕೆಲಸ ಹೇಗಾಗುತ್ತದೆ’ಎಂದು ಅವರು ಪ್ರಶ್ನಿಸಿದರು.

‘12ನೇ ಶತಮಾನದಲ್ಲೇ ಬಸವಣ್ಣನವರು ವೈದಿಕ ಧರ್ಮಕ್ಕೆ ಪರ್ಯಾಯವಾದ ಆಯ್ಕೆಯನ್ನು ಜನರ ಮುಂದಿಟ್ಟಿದ್ದರು.ಆದರೆ, ಆಗ ಅದಕ್ಕೆ ಲಿಂಗಾಯತ ಅಂತೇನೂ ಹೆಸರಿಟ್ಟಿರಲಿಲ್ಲ.ಇದರ ಅರ್ಥ ಬಸವಣ್ಣನವರು ಅಂದು ಜಾತಿ ವಿಭಜನೆ ಮಾಡಿದರು ಎಂದಲ್ಲ. ಪಟ್ಟಭದ್ರರು ಎಲ್ಲ ಕಾಲದಲ್ಲೂ ಬದಲಾವಣೆಯನ್ನು ವಿರೋಧಿಸಿದ್ದಾರೆ.ನಡೆ, ನುಡಿಯಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ತೋಂಟದ ಶ್ರೀಗಳೂ ಪಟ್ಟಭದ್ರರ ವಿರೋಧ ಎದುರಿಸಿದ್ದರು’ಎಂದು ಸಿದ್ಧರಾಮಯ್ಯ ಹೇಳಿದರು.

ADVERTISEMENT

‘ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದ್ದು, ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದ್ದು, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ್ದು ಜನರ ಪ್ರೀತಿ ಪಡೆಯಲು ಅಥವಾ ಮತಗಳಿಕೆಗಾಗಿ ಮಾಡಿದ ಬದಲಾವಣೆಗಳಲ್ಲ’ಎಂದು ಅವರು ಸ್ಪಷ್ಟಪಡಿಸಿದರು.

‘ಪ್ರತ್ಯೇಕ ಧರ್ಮದ ಶಿಫಾರಸ್ಸನ್ನು ಮೊದಲು ಸ್ವಾಗತ ಮಾಡಿದವರೇ ತೋಂಟದ ಶ್ರೀಗಳು.ನಂತರ ನಾಡಿನ ಉಳಿದ ಮಠಾಧೀಶರು ಸ್ವಾಗತಿಸಿದರು. ಇದರ ಹಿಂದೆ ಯಾವುದೇ ಸ್ವಾರ್ಥ ಅಡಗಿಲ್ಲ.ಇದರಿಂದ ವೈಯಕ್ತಿಕವಾಗಿ ಸ್ವಲ್ಪ ತೊಂದರೆ ಆಯಿತು. ಆದರೆ, ಈ ವಿಷಯವಾಗಿ ನನ್ನನ್ನು ಹಾಕ್ಕೊಂಡು ಬಡೀತಾ ಇದ್ದೀರಲ್ಲಾ, ಇದರಲ್ಲಿ ನನ್ನ ತಪ್ಪೇನಿದೆ, ನಾನು ಹೇಗೆ ಜವಾಬ್ದಾರನಾಗುತ್ತೇನೆ’ಎಂದ ಅವರು, ಆಗಿದ್ದು ಆಯಿತು ಬಿಡಿ, ಈಗ ಅದರ ಬಗ್ಗೆ ಮಾತನಾಡುವುದಿಲ್ಲ’ಎಂದು ಭಾಷಣ ಮುಕ್ತಾಯಗೊಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು,‘ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಶಿಫಾರಸು ಮಾಡುವಾಗ ಸಿದ್ದರಾಮಯ್ಯ ಅವರಿಗೆ ಬೇರೆ ಯಾವುದೇ ಉದ್ದೇಶ ಇರಲಿಲ್ಲ.ಯಾರು, ಏನು ಬೇಕಾದರೂ ಹೇಳಿಕೊಳ್ಳಲಿ, ಅವರು ಮಾಡಿದ್ದು ಐತಿಹಾಸಿಕ ಕಾರ್ಯ’ಎಂದರು.

ತೋಂಟದ ಸಿದ್ಧರಾಮ ಸ್ವಾಮೀಜಿ, ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿ, ನಿಜಗುಣಪ್ರಭು ಸ್ವಾಮೀಜಿ, ಶಾಸಕ ಎಚ್‌.ಕೆ ಪಾಟೀಲ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.