ADVERTISEMENT

ಯಡಿಯೂರಪ್ಪ, ಅಮಿತ್ ಶಾ ರಾಜೀನಾಮೆಗೆ ಆಗ್ರಹ

ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ ವಿರುದ್ಧ ಸಿದ್ಧರಾಮಯ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 14:50 IST
Last Updated 4 ನವೆಂಬರ್ 2019, 14:50 IST
ಮುಂಡಗೋಡದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು
ಮುಂಡಗೋಡದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು   

ಮುಂಡಗೋಡ: ‘ಯಡಿಯೂರಪ್ಪ ಅವರು ಎರಡು ನಾಲಿಗೆಯಿಂದ ಮಾತನಾಡುತ್ತಿದ್ದಾರೆ. ಅಮಿತ್ ಶಾ ಈಗ ಗುದ್ದುತ್ತಿದ್ದಾರೆ. ಅದಕ್ಕೆ ಯಡಿಯೂರಪ್ಪ ಆಡಿಯೊಕುರಿತು ಹೇಳಿಕೆ ತಿರುಚಿದ್ದಾರೆ ಎನ್ನುತ್ತಿದ್ದಾರೆ. ಬಿಜೆಪಿಯ ಕೋರ್ ಕಮಿಟಿಯಲ್ಲಿ ಇದ್ದಂತಹ ನಳೀನಕುಮಾರ ಕಟೀಲ್ ಅಥವಾ ಲಕ್ಷ್ಮಣ ಸವದಿ ಆಡಿಯೋ ಲೀಕ್ ಮಾಡಿರಬಹುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯಆರೋಪಿಸಿದರು.

ಪಟ್ಟಣದಲ್ಲಿ ಸೋಮವಾರಆಯೋಜಿಸಲಾದ‘ಕೇಂದ್ರದ ಆರ್ಥಿಕ ನೀತಿ ವಿರುದ್ಧ ಜನಾಂದೋಲನ ಹಾಗೂ ಕಾರ್ಯಕರ್ತರ ಸಮಾವೇಶ’ದಲ್ಲಿ ಅವರು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

‘ಆಡಿಯೋ ವಿಚಾರದ ಬಗ್ಗೆ ಮಾತನಾಡಿದ್ದಕ್ಕೆ, ರಾಜ್ಯ ಸರ್ಕಾರದ ಮಂತ್ರಿಗಳು ತಮ್ಮ ಮೇಲೆ ಮುಗಿಬಿದ್ದಿದ್ದಾರೆ. ಸತ್ಯ ಹೊರಬಂದಿದ್ದಕ್ಕೆ ಇವರಿಗೆ ಹುಚ್ಚು ಹಿಡಿದಿದೆ. ಅಧಿಕಾರದಲ್ಲಿ ಇರಲು ಇವರು ಲಾಯಕ್ಕಿಲ್ಲ. ಮಾನ, ಮರ್ಯಾದೆ ಇದ್ದರೆ ಅಮಿತ್ ಶಾ ಹಾಗೂ ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಶಾಸಕರ ರಾಜೀನಾಮೆ ಕೊಡಿಸಿರುವುದು ಅಸಾಂವಿಧಾನಿಕ, ಪ್ರಜಾಪ್ರಭುತ್ವಕ್ಕೆ ಮಾರಕ ಕೆಲಸ. ಪಕ್ಷಾಂತರ ನಿಷೇಧ ಕಾಯ್ದೆಯ ಆಶಯವನ್ನು ಹಾಳು ಮಾಡಲು ಅಮಿತ್ ಶಾ ಹಾಗೂ ಯಡಿಯೂರಪ್ಪ ಮುಂದಾಗಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇನೆ ಎನ್ನುವ ವ್ಯಕ್ತಿಯನ್ನುನಾಲ್ಕುಲಕ್ಷ ಮತಗಳಿಂದ ಗೆಲ್ಲಿಸುತ್ತೀರಿ. ಮುಂದೆ ಇಂತಹ ತಪ್ಪು ಮಾಡಬೇಡಿ’ ಎಂದು ಸಂಸದ ಅನಂತಕುಮಾರ ಹೆಗಡೆ ಹೆಸರು ಹೇಳದೆಯೇ ಸಾರ್ವಜನಿಕರಲ್ಲಿ ಮನವಿ ಮಾಡಿದರು.

‘ಬೆನ್ನಿಗೆ ಚೂರಿ ಹಾಕಿ ಬಿಟ್ಟರು’: ‘ಯಲ್ಲಾಪುರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ನನ್ನ ಸರ್ಕಾರವೇ ಹಣ ನೀಡಿದೆಯೇ ಹೊರತು ಅನರ್ಹಗೊಂಡಿರುವ ಶಿವರಾಮ ಹೆಬ್ಬಾರ್ ದುಡ್ಡು ತಂದಿಲ್ಲ. ಅತಿ ವಿನಯದಿಂದ ಇರುವವರನ್ನು ನಂಬಬಾರದು. ಬೆನ್ನಿಗೆ ಚೂರಿ ಹಾಕಿ ಬಿಟ್ಟರು. ನನಗೆ ಅಥವಾ ಪಕ್ಷಕ್ಕೆ ಚೂರಿ ಹಾಕಿದ್ದರೆ ಪರವಾಗಿಲ್ಲ. ಆದರೆ, ಈ ಕ್ಷೇತ್ರದ ಮತದಾರರಿಗೆ ಮೋಸ ಮಾಡಿದ್ದಕ್ಕೆ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ. ಪ್ರತಿ ಸಲ ಬಂದಾಗ ದೇಶಪಾಂಡೆ ಬಗ್ಗೆ ದೂರು ಹೇಳುತ್ತಿದ್ದರು’ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

‘ಈ ಹಿಂದೆ ಬಿಜೆಪಿಯಲ್ಲಿ ಇದ್ದಿದ್ದ ಶಿವರಾಮ ಹೆಬ್ಬಾರ್ ಅವರನ್ನು ಆರ್.ವಿ.ದೇಶಪಾಂಡೆ ಅವರೇ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ್ದರು. ಹೆಬ್ಬಾರ್ ತಮ್ಮನ್ನು ಮಾರಾಟ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿರುವ ಅವರಿಗೆ ಪಾಠ ಕಲಿಸಬೇಕಾಗಿದೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಶಾಸಕರಾದ ಆರ್‌.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ,ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ, ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಘೋಟ್ನೇಕರ್, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.