ADVERTISEMENT

‘ಕಾವೇರಿ’ ತೊರೆದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 3:07 IST
Last Updated 30 ಜನವರಿ 2020, 3:07 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ಆರು ವರ್ಷಗಳಿಗೂ ಹೆಚ್ಚು ಅವಧಿವರೆಗೆ ನೆಲೆಸಿದ್ದ ಸರ್ಕಾರಿ ಬಂಗಲೆ ‘ಕಾವೇರಿ’ಯನ್ನು ತೊರೆದಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕುಮಾರಕೃಪಾ–1ಕ್ಕೆ ತಮ್ಮ ನಿವಾಸ ಬದಲಿಸಿದ್ದಾರೆ.

ಮುಖ್ಯಮಂತ್ರಿಯಾಗಿದ್ದಾಗ ‘ಕಾವೇರಿ’ಯನ್ನು ಅವರು ತಮ್ಮ ವಾಸ್ತವ್ಯಕ್ಕೆ ಹಂಚಿಕೆ ಮಾಡಿಕೊಂಡಿದ್ದರು. 2018ರ ವಿಧಾನಸಭೆ ಚುನಾವಣೆ ಬಳಿಕ ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಅವರು, ಸಚಿವ ಸ್ಥಾನಮಾನ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕೆಲದಿನ ಅಲ್ಲಿಯೇ ತಮ್ಮ ವಾಸ್ತವ್ಯ ಮುಂದುವರಿಸಿದ್ದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ‘ಕಾವೇರಿ’ಯನ್ನು ಬಿಟ್ಟುಕೊಡಬೇಕಾದ ಸಂದರ್ಭ ಎದುರಾದಾಗ ಅಂದು ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರ ಹೆಸರಿಗೆ ಹಂಚಿಕೆ ಮಾಡಿಸಿಕೊಂಡು ಅಲ್ಲಿಯೇ ಉಳಿದುಕೊಂಡಿದ್ದರು.

ADVERTISEMENT

ಬಿಜೆಪಿ ಸರ್ಕಾರ ಬರುತ್ತಿದ್ದಂತೆ ವಿರೋಧ ಪಕ್ಷದ ನಾಯಕರಾದ ಅವರು, ಅದೇ ನಿವಾಸವನ್ನು ತಮಗೆ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾಕ್ಕೆ ಹೊಂದಿಕೊಂಡಂತೆ ಇರುವ ‘ಕಾವೇರಿ’ಗೆ ತಮ್ಮ ವಾಸ್ತವ್ಯ ಬದಲಿಸಲು ಮುಂದಾಗಿದ್ದ ಯಡಿಯೂರಪ್ಪ, ಅದನ್ನು ತಮಗೆ ಹಂಚಿಕೆ ಮಾಡಿಕೊಂಡಿ
ದ್ದರು. ಸಿದ್ದರಾಮಯ್ಯ ಅವರಿಗೆ ಕುಮಾರಕೃಪಾ–1 ಅನ್ನು ಹಂಚಿಕೆ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಅವರು ‘ಕಾವೇರಿ’ ತೆರವು ಮಾಡಿರಲಿಲ್ಲ. ಮುಖ್ಯಮಂತ್ರಿಗೆ ಮನೆ ಬಿಟ್ಟುಕೊಡದ ಸಿದ್ದರಾಮಯ್ಯ ಎಂದು ಬಿಜೆಪಿ ನಾಯಕರು ಟೀಕೆ ಮಾಡಿದ್ದರು. ಇದು ಆರೋಪ–‍ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಬುಧವಾರ (ಜ.29) ‘ಕಾವೇರಿ’ ತೊರೆದ ಸಿದ್ದರಾಮಯ್ಯ ತಮಗೆ ಹಂಚಿಕೆಯಾದ ಮನೆಗೆ ಅಧಿಕೃತವಾಗಿ ಸ್ಥಳಾಂತರ
ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.