ADVERTISEMENT

ಮೌಢ್ಯ ನಿಷೇಧ ಕಾಯ್ದೆಗೆ ತಿಲಾಂಜಲಿ ಇಟ್ಟು ‘ಸಿಡಿ’ ಚಾಲನೆ ಕೊಟ್ಟ ರೇಣುಕಾಚಾರ್ಯ

ಮೌಢ್ಯ ನಿಷೇಧ ಕಾಯ್ದೆಗೇ ತಿಲಾಂಜಲಿ ಇಟ್ಟ ಸಿಎಂ ರಾಜಕೀಯ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 19:58 IST
Last Updated 28 ಜನವರಿ 2020, 19:58 IST
ಹೊನ್ನಾಳಿ ಸಮೀಪದ ಕೆಂಚಿಕೊಪ್ಪ ಗ್ರಾಮದಲ್ಲಿ ಮಹಿಳೆಯನ್ನು ಕಂಬಕ್ಕೆ ಕಟ್ಟಿ ನಡೆಸಲಾದ ಸಿಡಿ ಬಂಡಿ ಉತ್ಸವಕ್ಕೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಚಾಲನೆ ನೀಡಿದರು. 
ಹೊನ್ನಾಳಿ ಸಮೀಪದ ಕೆಂಚಿಕೊಪ್ಪ ಗ್ರಾಮದಲ್ಲಿ ಮಹಿಳೆಯನ್ನು ಕಂಬಕ್ಕೆ ಕಟ್ಟಿ ನಡೆಸಲಾದ ಸಿಡಿ ಬಂಡಿ ಉತ್ಸವಕ್ಕೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಚಾಲನೆ ನೀಡಿದರು.    

ಹೊನ್ನಾಳಿ: ಸಿಡಿ ಬಂಡಿ ಉತ್ಸವವನ್ನು ನಿಷೇಧಿಸಿ ರಾಜ್ಯ ಸರ್ಕಾರ ಈಚೆಗೆ ಆದೇಶ ಹೊರಡಿಸಿದ್ದರೂ ತಾಲ್ಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಸಮ್ಮುಖದಲ್ಲೇ ಸಿಡಿ ಉತ್ಸವ ಮಂಗಳವಾರ ನಡೆಯಿತು.

ಉತ್ಸವದ ನೆಪದಲ್ಲಿ ಎರಡೂ ಕಂಬಗಳಿಗೂ ದಲಿತ ಮಹಿಳೆಯರನ್ನು ಸಿಡಿ ಕಂಬಕ್ಕೆ ಕಟ್ಟಿ ನೇತುಹಾಕಲಾಗಿತ್ತು. ಕಳೆದ ಬಾರಿ ಮಹಿಳೆಯರನ್ನು ಕೊಕ್ಕೆಯ ಮೂಲಕ ನೇತು ಹಾಕಲಾಗಿತ್ತು. ಈ ಬಾರಿ ಅಡ್ಡೆಗೆ ಕಟ್ಟಿದ್ದರು.

ಸಿಡಿ ಬಂಡಿ ಉತ್ಸವ ಮೌಢ್ಯ ನಿಷೇಧ ಕಾನೂನು ವ್ಯಾಪ್ತಿಯೊಳಗೆ ಬರಲಿದ್ದು, ಅದನ್ನು ನಿಷೇಧಿಸಿದ್ದರೂ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಈ ಕುರಿತು ರೇಣುಕಾಚಾರ್ಯ ಅವರನ್ನು ಪ್ರಶ್ನಿಸಿದಾಗ, ‘ಸಿಡಿ ಬಂಡಿ ಉತ್ಸವ ಮೌಢ್ಯವಲ್ಲ. ಜನರ ಪ್ರೀತಿ ಮತ್ತು ಭಕ್ತಿಯ ಆಚರಣೆ’ ಎಂದು ಸಮರ್ಥಿಸಿಕೊಂಡರು.

‘ನೂರಾರು ವರ್ಷಗಳ ಹಿಂದೆ ಗ್ರಾಮಗಳಲ್ಲಿ ಹರಡುತ್ತಿದ್ದ ಅನೇಕ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದ ಜನ ಮತ್ತು ಜಾನುವಾರು ಅಪಾಯಕ್ಕೆ ತುತ್ತಾಗುತ್ತಿದ್ದ ಸಂದರ್ಭ ಜನರು ದೇವರ ಮೇಲೆ ನಂಬಿಕೆ ಇಟ್ಟು ಹರಕೆ ಹೊತ್ತು ಈ ಆಚರಣೆಯನ್ನು ಜಾರಿಗೆ ತಂದಿದ್ದಾರೆ. ಹೀಗಾಗಿ ಇದು ಭಕ್ತಿಯ ಆಚರಣೆಯೇ ಹೊರತು ಮೌಢ್ಯ ಅಲ್ಲ’ ಎಂದು ಹೇಳಿದರು.

‘ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ನಾನು ಚಾಲನೆ ಕೊಟ್ಟಿಲ್, ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಗ್ರಾಮಸ್ಥರು ಹೇಳಿದಂತೆ ಮಾಡಿದ್ದೇನೆ. ನನಗೆ ಅಧಿಕಾರ ಮುಖ್ಯವಲ್ಲ. ಜನರ ಮತ್ತು ಈ ಕ್ಷೇತ್ರದ ಅಭಿವೃದ್ಧಿ ಮುಖ್ಯ. ನನಗೆ ಎತ್ತಿನ ಬಂಡಿಯೇ ಶಾಶ್ವತ, ಜಟಕಾ ಬಂಡಿ ಹೊಡೆದುಕೊಂಡೇ ನಾನು ಹೊರಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಎಲ್ಲಿಯವರೆಗೂ ಜನರ ಪ್ರೀತಿ ಇರುತ್ತೋ ಅಲ್ಲಿಯವರೆಗೆ ನಾನು ಇರುತ್ತೇನೆ. ಇದು ನನ್ನ ಜನ್ಮಭೂಮಿ, ಇದೇ ನನ್ನ ಕರ್ಮಭೂಮಿ, ಅಧಿಕಾರ ನೀರ ಮೇಲಿನ ಗುಳ್ಳೆ’ ಎಂದು ಹೇಳಿದರು.

***

ಸಿಡಿ ಉತ್ಸವ ನನ್ನ ಗಮನಕ್ಕೆ ಬಂದಿದ್ದು, ಹೊನ್ನಾಳಿ ಠಾಣೆ ಎಸ್‌ಐ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡುವಂತೆ ತಿಳಿಸಿದ್ದೇನೆ. ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ.

- ಹನುಮಂತರಾಯ, ದಾವಣಗೆರೆ ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.