ಭೈರಪ್ಪ
ಮೈಸೂರು: ‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ. ಆದರೆ, ಬಿಜೆಪಿಯು ಕರ್ನಾಟಕದಲ್ಲಿ ಕೊನೆ ಪಕ್ಷ ಅರ್ಧಕ್ಕಿಂತಲೂ ಜಾಸ್ತಿ ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿದುಕೊಂಡಿದ್ದೇನೆ’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಭವಿಷ್ಯ ನುಡಿದಿದ್ದರು.
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು 2024ರ ಮಾರ್ಚ್ 29ರಂದು ತಮ್ಮನ್ನು ಭೇಟಿಯಾಗಿ ಆಶೀರ್ವಾದ ಕೋರಿದ ವೇಳೆ, ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
‘ರಾಜ್ಯದಲ್ಲಿ ನನ್ನ ಪ್ರಕಾರ ಈ ಬಾರಿ ಮತ ವಿಭಜನೆಯಾಗುತ್ತದೆ. ಆದರೆ, ಬಿಜೆಪಿಯು ತೀರಾ ಸೋತು ಹೋಗುವುದಿಲ್ಲ’ ಎಂದಿದ್ದರು.
‘ಕರ್ನಾಟಕದಲ್ಲಿ ಬಿಜೆಪಿಗೆ ಏಕೆ ಈ ಸ್ಥಿತಿ ಬಂದಿದೆ’ ಎಂಬ ಪ್ರಶ್ನೆಗೆ, ‘ರಾಜ್ಯದಲ್ಲಿ ಹಿಂದೆ ಇದ್ದ ಬಿಜೆಪಿ ಸರ್ಕಾರ ಪರಿಣಾಮಕಾರಿ ಆಗಿರಲಿಲ್ಲ. ಅಧಿಕಾರಿಗಳನ್ನು ನಿಯಂತ್ರಿಸುವುದು ಸಾಧ್ಯವಾಗಿರಲಿಲ್ಲ. ಅವರ ಕುರಿತು ಮೃದುವಾಗಿದ್ದರು. ಆದರೆ, ಈಗಿನ ಕಾಂಗ್ರೆಸ್‌ನವರು ಅಧಿಕಾರಿಗಳ ಮೇಲೆ ಬಹಳ ಜೋರಾಗಿದ್ದಾರೆ. ಆದರೆ, ಅವರು ಹೋಗುತ್ತಿರುವ ದಾರಿ ಸರಿ ಇಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ, ಎಲ್ಲವನ್ನೂ ಉಚಿತವಾಗಿ ಕೊಡುವುದು ಸರಿಯಲ್ಲ. ಅದು ಜನಪ್ರಿಯತೆ ತಂದು ಕೊಟ್ಟಿರಬಹುದೇ ಹೊರತು ಅರ್ಥ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ’ ಎಂದು ಹೇಳಿದ್ದರು.
ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿದ್ದ ಅವರು, ‘ಎಲ್ಲವನ್ನೂ ಉಚಿತವಾಗಿ ಕೊಡುತ್ತಿರುವುದರಿಂದ ರಾಜ್ಯ ಸರ್ಕಾರದಲ್ಲಿ ಹಣವೇ ಇಲ್ಲದಂತಾಗಿದೆ. ಹೀಗಾಗಿಯೇ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕೇಂದ್ರದಿಂದ ಕೊಟ್ಟಿದ್ದನ್ನೆಲ್ಲಾ ಖರ್ಚು ಮಾಡಿಕೊಂಡಿರುತ್ತಾರೆ. ಈಗ, ವಿತ್ತ ಸಚಿವರನ್ನು ಬೈಯ್ಯುತ್ತಿದ್ದಾರೆ. ಭಾಷೆಯನ್ನು ಗೌರವಯುತವಾಗಿ ಬಳಸುತ್ತಿಲ್ಲ. ಟೀಕಿಸುತ್ತಿರುವ ಸಂಸ್ಕೃತಿ ಸರಿ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದರು.
‘ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಗ್ಯಾರಂಟಿಯಾಗಿ ಹೇಳಬಹುದು. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಕಷ್ಟ. ರಾಜ್ಯದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಆಗಿದೆ. ಉತ್ತರಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಬಿಜೆಪಿ ಸರ್ಕಾರ ನಡೆದುಕೊಂಡಿದ್ದರೆ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲಬಹುದಿತ್ತು. ಯೋಗಿ ಆದಿತ್ಯನಾಥ ಅವರಂತಹ ಮುಖ್ಯಮಂತ್ರಿಯನ್ನು ಕಂಡಿಲ್ಲ’ ಎಂದಿದ್ದರು.
‘ಕರ್ನಾಟಕದಲ್ಲಿ ಸ್ವಲ್ಪ ಆ ಕಡೆಗೂ, ಈ ಕಡೆಗೂ ಎನ್ನುವಂತಹ ಸ್ಥಿತಿ ಇದೆ’ ಎಂದಿದ್ದ ಅವರು, ‘ಕರ್ನಾಟಕದಲ್ಲಿ ಮೋದಿ ಅಲೆ ಕಡಿಮೆ ಆಗಿದೆಯಾ’ ಎಂಬ ಪ್ರಶ್ನೆಗೆ ‘ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.