ADVERTISEMENT

ನಿಧಾನಗತಿಯ ಕಾಮಗಾರಿ, ಹುಲಿ, ಸಿಂಹ ಸಫಾರಿ ಇನ್ನಷ್ಟು ವಿಳಂಬ

ಇನ್ನೂ ಸಿಗದ ಪರಿಸರ ಇಲಾಖೆಯ ಅನುಮತಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ಡಿಸೆಂಬರ್ 2018, 19:38 IST
Last Updated 20 ಡಿಸೆಂಬರ್ 2018, 19:38 IST
ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಹುಲಿ ಸಫಾರಿಗೆ ಹೋಗುವ ದಾರಿ ನಾಮಫಲಕ ಬಿಟ್ಟರೆ ಬೇರೇನೂ ಕೆಲಸ ಆಗದೇ ಇರುವುದು ನೋಡಬಹುದು
ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಹುಲಿ ಸಫಾರಿಗೆ ಹೋಗುವ ದಾರಿ ನಾಮಫಲಕ ಬಿಟ್ಟರೆ ಬೇರೇನೂ ಕೆಲಸ ಆಗದೇ ಇರುವುದು ನೋಡಬಹುದು   

ಹೊಸಪೇಟೆ: ಪರಿಸರ ಇಲಾಖೆಯಿಂದ ಅನುಮತಿ ಪಡೆಯದೇ ಸಫಾರಿ ಆರಂಭಿಸಲಾಗುತ್ತಿದೆ ಎಂದು ಪರಿಸರವಾದಿಯೊಬ್ಬರು ತಕರಾರು ತೆಗೆದು ನ್ಯಾಯಾಲಯದ ಮೊರೆ ಹೋಗಿರುವುದು, ನಿಧಾನಗತಿ ಕಾಮಗಾರಿಯಿಂದ ತಾಲ್ಲೂಕಿನ ಬಿಳಿಕಲ್‌ ಸಂರಕ್ಷಿತ ಅರಣ್ಯ ಪ್ರದೇಶದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಹುಲಿ, ಸಿಂಹ ಸಫಾರಿ ಆರಂಭವಾಗಲು ಇನ್ನಷ್ಟು ವಿಳಂಬವಾಗಲಿದೆ.

‘ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳದೆ ಸಂರಕ್ಷಿತ ಅರಣ್ಯಕ್ಕೆ ಪ್ರಾಣಿಗಳನ್ನು ತಂದು, ಸಫಾರಿ ಆರಂಭಿಸುವುದು ಸರಿಯಲ್ಲ’ ಎಂದು ಪರಿಸರವಾದಿ ಸಂತೋಷ್‌ ಮಾರ್ಟಿನ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಜೈವಿಕ ಉದ್ಯಾನದ ಅಧಿಕಾರಿಗಳು, ಈಗ ಪರಿಸರ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಇನ್ನಷ್ಟೇ ಅನುಮತಿ ಸಿಗಬೇಕಿರುವುದರಿಂದ ಸಫಾರಿ ಆರಂಭವಾಗುವುದು ಇನ್ನಷ್ಟು ವಿಳಂಬವಾಗಲಿದೆ.

ಪರಿಸರ ಇಲಾಖೆಯ ಅನುಮತಿ ಜತೆಗೆ ಹುಲಿ, ಸಿಂಹ ಸಫಾರಿಯ ಜಾಗದಲ್ಲಿ ತಂತಿ ಬೇಲಿ ಹಾಕಿ, ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಬಹಳ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಈ ಕಾಮಗಾರಿ ವರ್ಷದ ಹಿಂದೆಯೇ ಮುಗಿಯಬೇಕಿತ್ತು. ಆದರೆ, ಇನ್ನೂ ಮುಗಿದಿಲ್ಲ. ಈ ಸಂಬಂಧ ಗುತ್ತಿಗೆದಾರ ವೇದಮೂರ್ತಿ ಅವರಿಗೆ ಉದ್ಯಾನದ ಕಡೆಯಿಂದ ನೋಟಿಸ್‌ ಜಾರಿ ಮಾಡಲಾಗಿದೆ.

ADVERTISEMENT

ಹೋದ ವರ್ಷದ ನವೆಂಬರ್‌ನಲ್ಲಿ ಬಳ್ಳಾರಿ ಪ್ರಾಣಿ ಸಂಗ್ರಹಾಲಯದಿಂದ ಜಿಂಕೆ, ಕೃಷ್ಣಮೃಗಗಳನ್ನು ಉದ್ಯಾನಕ್ಕೆ ತರಲಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದಿರಾ ಪ್ರಿಯದರ್ಶಿನಿ ಜಿಂಕೆ ಉದ್ಯಾನ ಉದ್ಘಾಟಿಸಿದ್ದರು. 2018ರ ನವೆಂಬರ್‌ನಲ್ಲಿ ಸಫಾರಿ ಆರಂಭಿಸಲಾಗುವುದು ಎಂದು ಅದೇ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದರು. ಆದರೆ, ಡಿಸೆಂಬರ್‌ ಮೂರನೇ ವಾರ ಕಳೆಯುತ್ತ ಬಂದರೂ ಆ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಕಾಮಗಾರಿ ಕುಂಠಿತಗೊಂಡಿರುವುದರಿಂದ ಬಳ್ಳಾರಿಯಿಂದ ಚಿರತೆ, ಕತ್ತೆಕಿರುಬ, ಕರಡಿ, ಬಿಳಿ ನವಿಲುಗಳು, ಮೊಸಳೆಗಳನ್ನು ಉದ್ಯಾನಕ್ಕೆ ಸ್ಥಳಾಂತರಿಸುವ ಕೆಲಸ ನಿಂತು ಹೋಗಿದೆ.

ಹಂಪಿ ಸನಿಹದಲ್ಲೇ ಇರುವುದರಿಂದ ನಿತ್ಯ ಅನೇಕ ಜನ ಪ್ರವಾಸಿಗರು ಉದ್ಯಾನಕ್ಕೆ ಭೇಟಿ ಕೊಡುತ್ತಿದ್ದಾರೆ. ಆದರೆ, ಜಿಂಕೆ, ಕೃಷ್ಣಮೃಗಳನ್ನು ಹೊರತುಪಡಿಸಿ ಅನ್ಯ ಪ್ರಾಣಿಗಳು ಬಾರದೇ ಇರುವುದು, ಸಫಾರಿ ಆರಂಭಗೊಳ್ಳದೇ ಇರುವ ವಿಷಯ ತಿಳಿದು ಹಿಂತಿರುಗುತ್ತಿದ್ದಾರೆ. ಈ ವಿಷಯವನ್ನು ಉದ್ಯಾನದ ವಲಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ ಕುಮಾರ್‌ ಅವರೇ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

149.50 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿರುವ ಜಾಗದಲ್ಲಿ ಉದ್ಯಾನ ನಿರ್ಮಾಣಕ್ಕೆ 2010ರಲ್ಲಿ ಚಾಲನೆ ಸಿಕ್ಕಿತ್ತು. ಈಗಾಗಲೇ ₨32 ಕೋಟಿ ವೆಚ್ಚವಾಗಿದೆ. ಉದ್ಯಾನಕ್ಕೆ ಸೇರಿದ ಜಾಗದ ಸುತ್ತಲೂ ತಂತಿಬೇಲಿ, ಐದು ಕೆರೆಗಳ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಹುಲಿ, ಸಿಂಹಗಳು ಬಂದರೆ ಪೂರ್ಣ ಪ್ರಮಾಣದಲ್ಲಿ ಉದ್ಯಾನ ಕಾರ್ಯಾರಂಭ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.