ADVERTISEMENT

‘ಉದಯರವಿ’ ಅಭಿವೃದ್ಧಿಗೆ ಆಗ್ರಹಿಸಿ ಎಸ್‌ಎಂಕೆ ಪತ್ರ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 14:59 IST
Last Updated 16 ಮಾರ್ಚ್ 2021, 14:59 IST
   

ಮಂಡ್ಯ: ರಾಷ್ಟ್ರಕವಿ ಕುವೆಂಪು ಅವರು ಮೈಸೂರಿನಲ್ಲಿ ಬಾಳಿ ಬದುಕಿದ ‘ಉದಯರವಿ’ ನಿವಾಸವನ್ನು ಸ್ಮಾರಕ ಹಾಗೂ ವಸ್ತುಸಂಗ್ರಹಾಲಯವನ್ನಾಗಿ ಅಭಿವದ್ಧಿಪಡಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

ಕುವೆಂಪು ಅವರು ನಾಡಿನ ಸಾಂಸ್ಕೃತಿಕ ಲೋಕದ ಸಾಕ್ಷಿ ಪ್ರಜ್ಞೆ, ವಿಶ್ವಮಾನವ ಸಂದೇಶ ಸಾರಿದ ಜಗದ ಕವಿ, ಶತಮಾನಗಳಿಂದ ಆದರ್ಶಪ್ರಾಯರಾದ ಮಹಾನ್‌ ಚೇತನ. ಕುವೆಂಪು ಅವರ ಬದುಕು ಮಾನವ ಕುಲಕ್ಕೆ ಮಾದರಿಯಾದುದು. ಯುವಜನರು ಸರ್ವಕಾಲಕ್ಕೂ ಕುವೆಂಪು ಅವರಿಂದ ಪ್ರಭಾವಿತರಾಗಿ ಕಲಿಯುವುದು ಬಹಳಷ್ಟಿದೆ. ಕುವೆಂಪು ಅವರು ನಮ್ಮ ಕಾಲಘಟ್ಟದಲ್ಲಿ ನಮ್ಮೊಂದಿಗೆ ಬಾಳಿ, ಬದುಕಿದ್ದು ನಮ್ಮೆಲ್ಲರ ಸುದೈವವಾಗಿದೆ ಎಂದು ತಿಳಿಸಿದ್ದಾರೆ.

2018–19ನೇ ಸಾಲಿನ ಬಜೆಟ್‌ನಲ್ಲಿ ಉದಯರವಿ ನಿವಾಸವನ್ನು ಅಭಿವೃದ್ಧಿಗೊಳಿಸಿ ರಾಜ್ಯದ ಮಹತ್ತರ ಸಾಂಸ್ಕೃತಿಕ ಸ್ಮಾರಕವನ್ನಾಗಿ ರೂಪಿಸುವುದಾಗಿ ಘೋಷಿಸಲಾಗಿತ್ತು. ಆದರೆ ಅದು ಕೇವಲ ಘೋಷಣೆಯಾಗಿ ಉಳಿದಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.

ADVERTISEMENT

ಮೈಸೂರು ನಗರ ಸಾಂಸ್ಕೃತಿಕ ರಾಜಧಾನಿಯಾಗಿದ್ದು ಒಡೆಯರ ಕೊಡುಗೆಗಳಿಂದ ವಿಶ್ವದ ಗಮನ ಸೆಳೆದ ಪ್ರವಾಸೋದ್ಯಮ ನಗರವಾಗಿದೆ. ವಿದ್ಯಾದಾನಕ್ಕೂ ಹೆಸರುವಾಸಿಯಾಗಿ ಹಲವು ಶೈಕ್ಷಣಿಕ ಸಂಸ್ಥೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಯನಿರ್ವಹಿಸಿ ಪ್ರಖ್ಯಾತಿಗೊಳಿಸಿವೆ. ಉದಯರವಿ ನಿವಾಸ ಮೈಸೂರು ನಗರದಲ್ಲಿರುವುದರಿಂದ ರಾಷ್ಟ್ರಕವಿಯ ಜೀವನವನ್ನು ಲಕ್ಷಾಂತರ ಜನರಿಗೆ ತಲುಪಿಸಲು ಅನುಕೂಲವಾಗುತ್ತದೆ. ಹೀಗಾಗಿ ಅವರ ನಿವಾಸವನ್ನು ಸ್ಮಾರಕವನ್ನಾಗಿಸುವುದು ಅನಿವಾರ್ಯ ಹಾಗೂ ಅಗತ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸರ್ಕಾರ ಕೂಡಲೇ ಕುವೆಂಪು ಅವರ ಕುಟುಂಬಸ್ಥರನ್ನು ಸಂಪರ್ಕಿಸಬೇಕು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸುವಂತೆ ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗ ಕುವೆಂಪು ಅವರ ನಿವಾಸವನ್ನು ಸ್ಮಾರಕವನ್ನಾಗಿ ಅಭಿವೃದ್ಧಿಗೊಳಿಸಿ ಬಹುದಿನದ ಕನಸನ್ನ ಈಡೇರಿಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.