ADVERTISEMENT

ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಪಿಸಿಆರ್ ದಾಖಲಿಸಲು ಜನಪ್ರತಿನಿಧಿಗಳ ಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 18:14 IST
Last Updated 23 ಜುಲೈ 2025, 18:14 IST
ಕೆ.ಜೆ.ಜಾರ್ಜ್‌
ಕೆ.ಜೆ.ಜಾರ್ಜ್‌   

ಬೆಂಗಳೂರು: 'ರಾಜ್ಯದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಸಂಬಂಧಿಸಿದ ಟೆಂಡರ್‌ ಸಂಪೂರ್ಣ ಕಾನೂನು ಬಾಹಿರವಾಗಿದೆ' ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ಅಧ್ಯಕ್ಷರೂ ಆದ ಇಂಧನ ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಪಿಸಿಆರ್ ದಾಖಲಿಸಿಕೊಳ್ಳಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಆರೋಪಕ್ಕೆ ಸಂಬಂಧಿಸಿದ ಖಾಸಗಿ ದೂರಿನ ವಿಚಾರಣೆ ನಡೆಸುತ್ತಿರುವ ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಈ ಕುರಿತಂತೆ ಬುಧವಾರ ಆದೇಶಿಸಿದ್ದಾರೆ.

'ಆರೋಪಿಗಳ ವಿರುದ್ಧದ ದೂರಿನ ಕುರಿತಾದ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ' ಎಂದು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿರುವ ನ್ಯಾಯಾಧೀಶರು ವಿಚಾರಣೆ ಮುಂದೂಡಿದ್ದಾರೆ.

ADVERTISEMENT

ದೂರಿನಲ್ಲಿ ಸಚಿವ ಕೆ.ಜೆ.ಜಾರ್ಜ್‌, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಬೆಸ್ಕಾಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಬೆಸ್ಕಾಂನ ತಾಂತ್ರಿಕ ನಿರ್ದೇಶಕ ಎಚ್‌.ಜೆ.ರಮೇಶ್‌ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ಬಿಜೆಪಿಯ ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಶಾಸಕರಾದ ಎಸ್.ಆರ್.ವಿಶ್ವನಾಥ್ ಹಾಗೂ ಧೀರಜ್ ಮುನಿರಾಜು ಈ ಖಾಸಗಿ ದೂರು ಸಲ್ಲಿಸಿದ್ದಾರೆ. ದೂರುದಾರರ ಪರ ಪದಾಂಕಿತ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದ್ದಾರೆ.

ದೂರಿನಲ್ಲಿ ಏನಿದೆ?:

'ಸ್ಮಾರ್ಟ್‌ ಮೀಟರ್‌ ಸೇವೆ ಒದಗಿಸುವ ನಿಟ್ಟಿನಲ್ಲಿ 2024ರ ಸೆಪ್ಟೆಂಬರ್ 26ರಂದು ಟೆಂಡರ್‌ ಕರೆಯಲಾಗಿತ್ತು. ಬಿಡ್‌ದಾರರಾದ ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಎಂಬ ಶೆಲ್‌ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಈ ಟೆಂಡರ್‌ ಅನ್ನು ರಾಜ್ಯದಲ್ಲಿ ವಿವಿಧ ಭಾಗಗಳ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಪ್ರತ್ಯೇಕ ಟೆಂಡರ್‌ ಕರೆಯದೆ ಬೆಸ್ಕಾಂ ಕಂಪನಿಯೊಂದಕ್ಕೇ ನೇರವಾಗಿ ನೀಡಲಾಗಿದೆ. ಈ ಕಾನೂನು ಬಾಹಿರವಾದ ಒಟ್ಟು ಪ್ರಕ್ರಿಯೆ ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಅಧಿನಿಯಮ-2000 ಹಾಗೂ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ನಿಯಮಗಳಿಗೆ ವಿರುದ್ಧವಾಗಿದೆ' ಎಂದು ದೂರುದಾರರು ಆರೋಪಿಸಿದ್ದಾರೆ.

'ದೂರಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 314, 316 ಮತ್ತು 61 ಹಾಗೂ ಭ್ರಷ್ಟಾಚಾರ ನಿಗ್ರಹ ತಿದ್ದುಪಡಿ ಕಾಯ್ದೆ–2018ರ ಕಲಂ 13(1) ಎ ಮತ್ತು 13(1) ಬಿ ಅನ್ವಯ ಆರೋಪಿಗಳ ವಿರದ್ಧ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಎಫ್‌ಐಆರ್ ದಾಖಲಿಸಲು ಆದೇಶಿಸಬೇಕು’ ಎಂದು ಫಿರ್ಯಾದುದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.