ADVERTISEMENT

ಸ್ಮಾರ್ಟ್‌ ಮೀಟರ್‌ ಟೆಂಡರ್‌ ಕಾನೂನು ಬಾಹಿರ: ಹೈಕೋರ್ಟ್‌ಗೆ ವಕೀಲರ ಅರ್ಜಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 20:21 IST
Last Updated 17 ಜೂನ್ 2025, 20:21 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಎಲ್ಲಾ ಗ್ರಾಹಕರು ಸ್ಮಾರ್ಟ್‌ ಮೀಟರ್‌ಗೆ ವರ್ಗಾವಣೆಯಾಗಬೇಕು ಮತ್ತು ಸ್ಮಾರ್ಟ್‌ ಮೀಟರ್ ಖರೀದಿಸಲೇಬೇಕು ಎನ್ನುವ ರೀತಿಯಲ್ಲಿ ರೂಪಿಸಲಾಗಿರುವ ಕರಡು ಸಂಪೂರ್ಣ ಗ್ರಾಹಕ ವಿರೋಧಿಯಾಗಿದೆ. ಅಂತೆಯೇ, ಈ ಕುರಿತಾದ ಟೆಂಡರ್‌ ಪ್ರಕ್ರಿಯೆ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ನಿಯಮಗಳಿಗೆ ಅನುಗುಣವಾಗಿ ನಡೆದಿಲ್ಲ’ ಎಂದು ಅರ್ಜಿದಾರರ ಪರ ಹಿರಿಯ ವಕೀಲರು ಹೈಕೋರ್ಟ್‌ಗೆ ಅರುಹಿದ್ದಾರೆ.

‘ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಸಂಬಂಧಿಸಿದಂತೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಹೊರಡಿಸಿರುವ ಸುತ್ತೋಲೆಯನ್ನು ರದ್ದುಪಡಿಸಬೇಕು ಹಾಗೂ ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಪ್ರೈವೆಟ್‌ ಲಿಮಿಟೆಡ್‌ಗೆ ಸ್ಮಾರ್ಟ್‌ ಮೀಟರ್‌ಗಳ ಮಾರಾಟ ಮತ್ತು ನಿರ್ವಹಣೆ ಟೆಂಡರ್‌ ನೀಡಿರುವುದು ಕಾನೂನು ಬಾಹಿರ’ ಎಂದು ಆಕ್ಷೇಪಿಸಲಾದ ಮೂರು ರಿಟ್‌ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್‌, ‘ಬೇರೆ ರಾಜ್ಯಗಳಲ್ಲಿ ಸಿಂಗಲ್‌ ಫೇಸ್‌ ಸ್ಮಾರ್ಟ್‌ ಮೀಟರ್‌ಗೆ ₹900 ಇದೆ. ಆದರೆ, ರಾಜ್ಯದಲ್ಲಿ ಸಿಂಗಲ್‌ ಫೇಸ್‌ ಮೀಟರ್‌ಗೆ ₹5,000 ನಿಗದಿಪಡಿಸಲಾಗಿದೆ. ಎಲೆಕ್ಟ್ರಿಕ್‌ ಸ್ಕೂಟರ್‌ ಚಾರ್ಜಿಂಗ್‌ ಮಾಡಲು ಅಗತ್ಯವಾದ ಮೂರು ಫೇಸ್‌ ಮೀಟರ್‌ಗೆ ₹8,000 ಪಾವತಿಸಬೇಕಿದೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರ, ರೀ–ಮ್ಯಾಪ್ಡ್‌ ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಸ್ಕೀಂ (ಆರ್‌ಡಿಎಸ್‌ಎಸ್‌) ಯೋಜನೆ ರೂಪಿಸಿದೆ. ಆದರೆ, ರಾಜ್ಯ ಸರ್ಕಾರ ಇದನ್ನೆಲ್ಲಾ ಅಲಕ್ಷಿಸಿ ಕೇಂದ್ರದ ಅನುಮೋದನೆ ಪಡೆಯದೆ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಮುಂದಾಗಿದೆ ಮತ್ತು ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಲಾಭ ಮಾಡಿಕೊಡಲು ಈ ಟೆಂಡರ್‌ ನಡೆಸಲಾಗಿದೆ’ ಎಂದು ಆರೋಪಿಸಿದರು.

ರಾಜಶ್ರೀ ಎಲೆಕ್ಟ್ರಿಕಲ್ಸ್‌ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ, ‘ಅರ್ಜಿದಾರರು ವಿವರಿಸುತ್ತಿರುವ ಅಂಶಗಳ ಆಧಾರದ ಏಕರೂಪದ ಕೋರಿಕೆಗಳನ್ನು ಒಳಗೊಂಡ ಬೇರೆ ಅರ್ಜಿಗಳು ಏಕಸದಸ್ಯ ನ್ಯಾಯಪೀಠದ ಮುಂದಿವೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಬೆಸ್ಕಾಂ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಉದಯ್‌ ಹೊಳ್ಳ ಅವರು ಅರ್ಜಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಬೆಸ್ಕಾಂ, ಕೆಇಆರ್‌ಸಿ ಹಾಗೂ ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ, ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

ಸ್ಮಾರ್ಟ್‌ ಮೀಟರ್‌ಗಳ ಅಳವಡಿಕೆ ಮತ್ತು ಈ ಕುರಿತಾದ ಟೆಂಡರ್‌ ಆಕ್ಷೇಪಿಸಿ, ‘ಕರ್ನಾಟಕ ವಿದ್ಯುತ್‌ ಸೇನೆ’ ಅಧ್ಯಕ್ಷ ಬಿ.ಜಯಪ್ರಕಾಶ್‌ ಮತ್ತು ಆರು ಜನರು, ರಾಮಚಂದ್ರ ಆರ್‌.ಅನವೇರಿ ಮತ್ತು ಎನ್‌.ಜಯಪಾಲ ಹಾಗೂ ಮುನಿಸ್ವಾಮಿಗೌಡ ಪ್ರತ್ಯೇಕವಾಗಿ ಈ ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.