ADVERTISEMENT

ಜೈನ ಸಾದ್ವಿಯಾಗಲು ನಿರ್ಧರಿಸಿದ ರಾಯಚೂರಿನ ಸ್ನೇಹಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 12:21 IST
Last Updated 23 ಜನವರಿ 2019, 12:21 IST
ವೈರಾಗಿಣಿಯಾದ ಸ್ನೇಹಾ
ವೈರಾಗಿಣಿಯಾದ ಸ್ನೇಹಾ   

ರಾಯಚೂರು: ನಗರದ ಶ್ವೇತಾಂಬರ ಜೈನಸಮುದಾಯದ ಸುಖಿಬಾಯಿ ದಿ.ಭವರಲಾಲ್‌ ಕೊಠಾರಿ ಅವರ ಮೊಮ್ಮಗಳು ಮತ್ತು ಮೀನಾಬಾಯಿ ಪ್ರಕಾಶ ಕೊಠಾರಿ ಅವರ ಕಿರಿಯ ಪುತ್ರಿ ಸ್ನೇಹಾ ಅವರು ಜೈನಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿದ್ದಾರೆ.

ಈ ಸಂಬಂಧ ನಗರದ ಪ್ರಮುಖ ಬೀದಿಗಳಲ್ಲಿ ಈಚೆಗೆ ಭವ್ಯ ಶೋಭಾಯಾತ್ರೆ ನಡೆಸಿ, ಬೀಳ್ಕೊಡಲಾಯಿತು. ನೂರಾರು ಜೈನ್‌ ಬಂಧುಗಳು, ಯುವಕ, ಯುವತಿಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

20ನೇ ವಯಸ್ಸಿನ ಸ್ನೇಹಾ ಅವರು ವೈರಾಗಿಣಿಯಾಗಿ ಬದಲಾಗಿದ್ದು, ಸಂಸಾರದ ಜಂಜಾಟಗಳಿಂದ ದೂರವಾಗಿ ಆತ್ಮ ಕಲ್ಯಾಣದ ರಾಜಮಾರ್ಗದಲ್ಲಿ ಸಾಗಲು ನಿರ್ಧರಿಸಿ ಜೈನಸಾದ್ವಿಯಾಗಿ ದೀಕ್ಷೆ ಪಡೆಯುವರು. 21ನೇ ಶತಮಾನದಲ್ಲಿ ದೊರೆಯುವ ಐಷಾರಾಮಿ ಜೀವನದ ಮಧ್ಯೆಯೂ ಸನ್ಯಾಸಿ ಆಗುತ್ತಿರುವುದಕ್ಕೆ ಇಡೀ ಜೈನಸಮುದಾಯ ಮತ್ತು ಬಂಧುಗಳಿಗೆ ಒಂದು ಕಡೆ ಸಂತೋಷ ಮತ್ತು ದುಃಖದಾಯಕ ಸಂಗತಿ ಇದಾಗಿದೆ ಎಂದು ತಿಳಿಸಲಾಗಿದೆ.

ADVERTISEMENT

ಮೆರವಣಿಗೆಯ ಬಳಿಕ ಜೈನಭವನದಲ್ಲಿ ಸಮಾರಂಭ ನಡೆಯಿತು. ಶ್ರೀ ಸುಮತಿನಾಥ ಶ್ವೇತಾಂಬರ ಜೈನಮಂದಿರ ಟ್ರಸ್ಟ್‌ನಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಮೆರವಣಿಗೆಯಲ್ಲಿ ಸಮಾಜದ ಮುಖಂಡರಾದ ಪ್ರಕಾಶಮಲ್‌ ಚೊರಾಡಿಯಾ, ಪಾರಸಮಲ್‌ ಸುಖಾಣಿ, ಭಾಗಚಂದ ಕೊಠಾರಿ, ಪುಖರಾಜ ಚಾಚೇಡ್‌, ರಾಜುಭಾಯಿ ದೇಸಾಯಿ, ಖೇಮರಾಜ, ರಂಜಿತ ಕೊಠಾರಿಯಾ ಇದ್ದರು.

ಆಚಾರ್ಯ ಅಭಯಶೇಖರ ಸೂರೀಶ್ವರಜಿ ಗುರುಗಳ ಆಜ್ಞೆಯಂತೆ ವಿಮಲಸೇನ ವಿಜಯಜಿ ಗುರುಗಳ ದಿವ್ಯ ಸಾನಿಧ್ಯದಲ್ಲಿ, ಗುರುಮಾತಾ ಅನಂತಕೀರ್ತಿಜಿ ಮತ್ತು ಸಾದ್ವಿಜಿ ಜೀನದರ್ಶನ ಶ್ರೀಜಿ ಅವರ ಸಮ್ಮುಖದಲ್ಲಿ ಗುಜರಾತ ರಾಜ್ಯದ ಅಹ್ಮದಾಬಾದ್‌ನ ಜೈನ್‌ ನಗರದಲ್ಲಿ ಫೆಬ್ರುವರಿ 8 ರಂದು ಜೈನಸಂಪ್ರದಾಯದಂತೆ ಸ್ನೇಹಾ ಅವರು ದೀಕ್ಷೆ ಪಡೆದು ಸಾದ್ವಿ ಆಗುವರು.

ಮೀನಾಬಾಯಿ ಪ್ರಕಾಶ ಕೊಠಾರಿ ಅವರಿಗೆ ಸ್ನೇಹಾ ಕಿರಿಯ ಪುತ್ರಿಯಾಗಿದ್ದು, ಅಕ್ಕ ಪ್ರಿಯಾ ಮತ್ತು ಅಣ್ಣ ಪ್ರವೇಶ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.