ADVERTISEMENT

ನೊರೆಗೆ ಕಡಿವಾಣ–ಅಂಟುವಾಳಕ್ಕೆ ಮೊರೆ

ಸಾಬೂನು ಇಳುವರಿ ಸಸ್ಯದ ಕೃಷಿಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 20:15 IST
Last Updated 17 ಡಿಸೆಂಬರ್ 2018, 20:15 IST

ಬೆಳಗಾವಿ: ಪರಿಸರಕ್ಕೆ ಮಾರಕವಾಗಿರುವ ಸಾಬೂನು ಹಾಗೂ ಡಿಟರ್ಜೆಂಟ್‌ ನೊರೆಗಳಿಗೆ ಕಡಿವಾಣ ಹಾಕಲು ಅಂಟುವಾಳ ಕೃಷಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಬೇಸಾಯಕ್ಕಾಗಿ ₹10 ಕೋಟಿ ಮೀಸಲಿಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಜೆಟ್‌ ಭಾಷಣದಲ್ಲಿ ತಿಳಿಸಿದ್ದರು. 2018–19ರಿಂದ 2024–25ರ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ₹14.61 ಕೋಟಿ ಬಳಸಲು ತೋಟಗಾರಿಕಾ ನಿರ್ದೇಶಕರಿಗೆ ಅನುಮೋದನೆ ನೀಡಿದೆ. ಈ ವರ್ಷ ₹80 ಲಕ್ಷ ವೆಚ್ಚ ಮಾಡಲಾಗುತ್ತದೆ. ಪ್ರಥಮ ಕಂತಿನ ರೂಪದಲ್ಲಿ ₹40 ಲಕ್ಷ ಬಿಡುಗಡೆ ಮಾಡಲಾಗಿದೆ.

ಬೆಂಗಳೂರಿನ ಬೆಳ್ಳಂದೂರು ಕೆರೆ, ಬೈರಮಂಗಲ ಕೆರೆಗಳು ಕಲುಷಿತಗೊಂಡಿವೆ. ಸುತ್ತಲಿನ ಮನೆಗಳಿಂದ ಸೋಪು ಮತ್ತು ಡಿಟರ್ಜೆಂಟ್‌ ನೀರು ಹರಿದು ಕೆರೆಗೆ ಬರುತ್ತಿರುವುದು ನೊರೆ ಉಕ್ಕಲು ಕಾರಣ. ಬೆಳ್ಳಂದೂರು ಕೆರೆಗೆ ಪ್ರತಿನಿತ್ಯ ಕೋಟಿಗಟ್ಟಲೆ ಕೊಳಚೆ ನೀರು ಸೇರುತ್ತಿದೆ. ಎರಡು ವರ್ಷಗಳಲ್ಲಿ ನಾಲ್ಕು ಸಲ ಜಲಮೂಲದ ನೊರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಜಲಮೂಲಗಳ ಸಂರಕ್ಷಣೆಗೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ದಂಡ ವಿಧಿಸಿದೆ.

ADVERTISEMENT

ಸೋಪು ಮತ್ತು ಡಿಟರ್ಜೆಂಟ್‌ ಬಳಕೆಗೆ ಪರ್ಯಾಯವಾಗಿ ಅಂಟುವಾಳು ಕಾಯಿಯನ್ನು ಬಳಸಬಹುದು. ಅದಕ್ಕೆ ಅಂಟುವಾಳ ಕಾಯಿ ಬೇಸಾಯಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಹಿಂದೆ ನಾವು ಬಳಸುತ್ತಿದ್ದ ಅಂಟುವಾಳ ಕಾಯಿ ಮರೆಯಾಗಿ ಪರಿಸರಕ್ಕೆ ಹಾನಿಕಾರಕ ಪೌಡರ್‌, ಡಿಟರ್ಜೆಂಟ್‌ಗಳು ಬಳಕೆಗೆ ಬಂದಿವೆ. ಆದರೆ, ಮುಂದುವರಿದ ದೇಶಗಳಲ್ಲಿ ಪರಿಸರ ಸ್ನೇಹಿ ಅಂಟುವಾಳದ ಡಿಷ್‌ವಾಷ್‌ ಸೋಪು, ವಾಶಿಂಗ್‌ ಮೆಷಿನ್‌ ಸೋಪುಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಡೆಗಟ್ಟಬಹುದು’ ಎಂದರು.

‘ವಿದೇಶಗಳಲ್ಲಿ ಜನಪ್ರಿಯವಾಗುತ್ತಿರುವ ಪರಿಸರ ಸ್ನೇಹಿ ಡಿಟರ್ಜೆಂಟ್‌ ಉದ್ಯಮದ ಅವಕಾಶವನ್ನು ನಮ್ಮ ರೈತರಿಗೆ ಒದಗಿಸಿ ಅಂಟುವಾಳ ಕಾಯಿ ಆಧರಿತ ಸೋಪು ಮತ್ತು ಡಿಟರ್ಜೆಂಟ್‌ ಉತ್ಪಾದನೆಗೆ ನೆರವು ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.