ಚಿಕ್ಕೋಡಿಯಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಯಾದವ, ಹಣಬರ, ಗೊಲ್ಲ ಸಂಘದ ಶತಮಾನೋತ್ದವ ಸಮಾವೇಶ ಹಾಗೂ ಚಿತ್ರದುರ್ಗದ ಶ್ರೀಕೃಷ್ಞ ಯಾದವಾನಂದ ಸ್ವಾಮೀಜಿ ಅವರ 16ನೇ ಪಟ್ಟಾಭಿಷೇಕ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯರು ಶ್ರೀಗಳಿಗೆ ಪುಷ್ಟವೃಷ್ಟಿ ಮಾಡಿದರು.
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ನಾನು ಮುಖ್ಯಮಂತ್ರಿ ಆದಾಗಿನಿಂದ ಎಲ್ಲ ಸಮಾಜಗಳಿಗೂ ಸಮಾನ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲರಿಗೂ ಸಂಪತ್ತಿನ ಸಮಾನ ಹಂಚಿಕೆಯ ಪ್ರಯತ್ನ ನಡೆಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಯಾದವ, ಹಣಬರ, ಗೊಲ್ಲ ಸಂಘದ ಶತಮಾನೋತ್ದವ ಸಮಾವೇಶ ಹಾಗೂ ಚಿತ್ರದುರ್ಗದ ಶ್ರೀಕೃಷ್ಞ ಯಾದವಾನಂದ ಸ್ವಾಮೀಜಿ ಅವರ 16ನೇ ಪಟ್ಟಾಭಿಷೇಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ನಾವೆಲ್ಲ ಶೂದ್ರರು. ಚಿಕ್ಕೋಡಿ– ಸದಲಗಾ ಶಾಸಕ ಗಣೇಶ ಹುಕ್ಕೇರಿ, ಕಾಗವಾಡ ಶಾಸಕ ರಾಜು ಕಾಗೆ ಕೂಡ ಶೂದ್ರ. ಶೂದ್ರರನ್ನು ಬಿಟ್ಟು ಮೇಲಿನ ಮೂರು ವರ್ಗದವರು ಶಿಕ್ಷಣ ಪಡೆದು ಮುಂದೆ ಹೋದರು. ನಾವು ಹಿಂದೆ ಉಳಿದೆವು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ಬಹುಸಂಖ್ಯಾತರಿಗೆ ಸಿಕ್ಕಿಲ್ಲ. ಇವು ಸಿಕ್ಕಾಗ ಮಾತ್ರ ಸಮ ಸಮಾಜದ ನಿರ್ಮಾಣವಾಗಲು ಸಾಧ್ಯ. ಇದೇ ಅಸಮಾನತೆ ಮುಂದುವರಿದರೆ ಅವರೇ ಸ್ವಾತಂತ್ರ್ಯ ನಾಶ ಮಾಡುತ್ತಾರೆ ಎಂದು ಡಾ.ಅಂಬೇಡ್ಕರ್ ಹೇಳಿದ್ದಾರೆ’ ಎಂದರು.
‘ಅಂಬೇಡ್ಕರ್ ಅವರು ಹೇಳಿರುವ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ತತ್ವಗಳನ್ನು ಸ್ವಾಮೀಜಿಗಳು ನೆನಪಿಟ್ಟುಕೊಳ್ಳಬೇಕು. ದಲಿತರ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರ ವಿಮೋಚನೆಯಾದರೆ ಸಾಲದು; ಎಲ್ಲ ಜಾತಿಯ ಬಡವರಿಗೂ ಸಮಾನ ಅವಕಾಶ ಸಿಗಬೇಕು’ ಎಂದರು.
‘ಕುರುಬರು ಬರೀ ಕುರಿ ಕಾಯ್ದುಕೊಂಡೇ ಇರಬೇಕೆ? ಹಣಬರು, ಗೊಲ್ಲರು ಬರೀ ಹಸು ಸಾಕಿಕೊಂಡು ಹಾಲು ಕರೆದುಕೊಂಡೇ ಇರಬೇಕೆ? ನಾವೆಲ್ಲರೂ ಒಂದೇ ದೋಣಿಯ ಪ್ರಯಾಣಿಕರು. ಹಣಬ, ಯಾದವ, ಗೊಲ್ಲ ಸೇರಿದಂತೆ 28 ಉಪ ಜಾತಿಗಳನ್ನು ಒಳಗೊಂಡ ನಿಗಮ ಮಂಡಳಿ ಸ್ಥಾಪಿಸಬೇಕೆಂಬ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಅವರ ಬೇಡಿಕೆ ಬಗ್ಗೆ ಮುಖಂಡರೊಂದಿಗೆ ಚರ್ಚೆ ಮಾಡಿ ಮುಂದುವರಿಯುತ್ತೇನೆ’ ಎಂದರು.
ಚಿತ್ರದುರ್ಗದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಇಮ್ಮಡಿ ಸಿದ್ಧರಾಜ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಅಖಿಲ ಭಾರತ ಯಾದವ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಸಪನ್ ಘೋಷ್, ಸಚಿವರಾದ ಸತೀಶ ಜಾರಕಿಹೊಳಿ, ಭೈರತಿ ಸುರೇಶ, ರಾಜ್ಯ ಗೊಲ್ಲ ಯಾದವ ಹಣಬರ ಸಮಾಜದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.