ADVERTISEMENT

ಸಮಾಜ ಕಲ್ಯಾಣ ಹಾಸ್ಟೆಲ್‌ ಇತರರಿಗೂ ಪ್ರವೇಶ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 20:02 IST
Last Updated 15 ಜುಲೈ 2019, 20:02 IST

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸೀಟುಗಳನ್ನು ಮೆರಿಟ್‌ ಆಧಾರದಲ್ಲಿ ಇತರ ವಿದ್ಯಾರ್ಥಿಗಳಿಂದ ಭರ್ತಿ ಮಾಡಲು ನಿರ್ಧರಿಸಲಾಗಿದೆ.

‘ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುವ ದೃಷ್ಟಿಯಿಂದ ಹಾಸ್ಟೆಲ್‌ಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಮೆರಿಟ್ ಆಧಾರದ ಮೇಲೆ ತುಂಬಿಕೊಳ್ಳಲು ಕ್ರಮ ಕೈಗೊಳ್ಳಿ’ ಎಂದುಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ವಿ. ಅನ್ಬುಕುಮಾರ್ ಸುತ್ತೋಲೆ ಹೊರಡಿಸಿಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘2019-20ನೇ ಸಾಲಿನಲ್ಲಿ ವಿದ್ಯಾರ್ಥಿ ನಿಲಯಗಳ ಪ್ರವೇಶಾವಕಾಶ ಕೋರಿ ಅರ್ಜಿ ಸಲ್ಲಿಸುವ ಎಲ್ಲ ಅರ್ಹವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯಗಳಿಗೆ ದಾಖಲು ಮಾಡಲು ಕ್ರಮ ಕೈಗೊಳ್ಳುವುದು ಜಿಲ್ಲಾ ಮಟ್ಟದ ಅಧಿಕಾರಿಗಳ ಕರ್ತವ್ಯ. ವಿದ್ಯಾರ್ಥಿ ನಿಲಯಗಳ ಮಂಜೂರಾತಿ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ನೂತನ ವಿದ್ಯಾರ್ಥಿ ನಿಲಯಗಳ ಮಂಜೂರಾತಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಲಾಗುವುದು’ ಎಂದು ಆಯುಕ್ತರು ತಿಳಿಸಿದ್ದಾರೆ.

ADVERTISEMENT

ಕೆಲವು ವಿದ್ಯಾರ್ಥಿ ನಿಲಯಗಳಲ್ಲಿ ಮಂಜೂರಾತಿಗಿಂತಲೂ ಹೆಚ್ಚಿನ ಪ್ರವೇಶಾವಕಾಶ ಕಲ್ಪಿಸುತ್ತಿದ್ದುದರಿಂದ ಆಗುತ್ತಿದ್ದ ತೊಂದರೆಗಳನ್ನು ನಿವಾರಿಸಲು ಮಂಜೂರಾತಿ ಸಂಖ್ಯೆಗಿಂತ ಹೆಚ್ಚು ಪ್ರವೇಶಾವಕಾಶ ನಿರ್ಬಂಧಿಸಲಾಗಿತ್ತು.

2019-20ನೇ ಸಾಲಿನಲ್ಲಿ 18 ಜಿಲ್ಲೆಗಳಲ್ಲಿಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಒಟ್ಟು 636 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ನಿರ್ವಹಿಸುತ್ತಿದ್ದು, 121 ವಿದ್ಯಾರ್ಥಿ ನಿಲಯಗಳಲ್ಲಿ ಮಂಜೂರಾತಿಗಿಂತಲೂ ಕಡಿಮೆ ದಾಖಲಾತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.