ADVERTISEMENT

ಲೈಂಗಿಕ ದೌರ್ಜನ್ಯ ಪೀಡಿತರಿಗೆ ಸಾಂತ್ವನ: ನಿಮ್ಹಾನ್ಸ್‌ ವಿಶೇಷ ಕೇಂದ್ರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 20:00 IST
Last Updated 29 ಸೆಪ್ಟೆಂಬರ್ 2018, 20:00 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು: ಲೈಂಗಿಕ ಕಿರುಕುಳದಿಂದಾಗಿ ಖಿನ್ನತೆ, ಒತ್ತಡ ಮತ್ತು ಆತಂಕದಂತಹ ಮನೋ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಸಾಂತ್ವನ ಮತ್ತು ಸಹಾಯ ಹಸ್ತವನ್ನು ನೀಡಲು ನಿಮ್ಹಾನ್ಸ್‌ ವಿಶೇಷ ಕೇಂದ್ರವೊಂದನ್ನು ಆರಂಭಿಸಲಿದೆ.

ಮನೋ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು ಈ ಕೇಂದ್ರಕ್ಕೆ ಬಂದು ಸಲಹೆ, ಸೂಚನೆಗಳನ್ನು ಪಡೆದುಕೊಳ್ಳಬಹುದು. ಇಲ್ಲಿ ಆಸ್ಪತ್ರೆಯಂತಹ ವಾತಾವರಣ ಇರುವುದಿಲ್ಲ ಮತ್ತು ಮಹಿಳೆಯರ ಕುರಿತ ಮಾಹಿತಿಯನ್ನು ಗೋಪ್ಯವಾಗಿಡಲಾಗುತ್ತದೆ ಎಂದು ನಿಮ್ಹಾನ್ಸ್‌ನ ಸೈಕಿಯಾಟ್ರಿ ವಿಭಾಗದ ಡಾ. ಪ್ರಭಾಚಂದ್ರ ತಿಳಿಸಿದರು.

‘ಅಕ್ಟೋಬರ್‌ 10 ವಿಶ್ವ ಮಾನಸಿಕ ಆರೋಗ್ಯ ದಿನವಾಗಿದ್ದು, ಅಂದುಬಿಟಿಎಂ ಲೇಔಟ್‌ನಲ್ಲಿರುವ ನಿಮ್ಹಾನ್ಸ್‌ ವೆಲ್‌ಬೀಯಿಂಗ್‌ ಸೆಂಟರ್‌ನಲ್ಲಿ ಈ ಕೇಂದ್ರ ಆರಂಭಗೊಳ್ಳುತ್ತದೆ. ಮಹಿಳೆ ಯಾವುದೇ ಹಿಂಜರಿಕೆ ಇಲ್ಲದೆ, ನಮ್ಮನ್ನು ಸಂಪರ್ಕಿಸಬಹುದು. ಈ ಕೇಂದ್ರಕ್ಕೆ ಬಂದು ಸೇರಲು ಪೊಲೀಸರನ್ನು ಸಂಪರ್ಕಿಸುವ ಅಥವಾ ದೂರು ನೀಡಬೇಕಾದ ಅಗತ್ಯವಿಲ್ಲ. ಮಹಿಳೆಯರು ಧೈರ್ಯದಿಂದ ಮುಕ್ತವಾಗಿ ಬರಬಹುದು’ ಎಂದು ಪ್ರಭಾಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಇನ್ಸ್‌ಟಿಟ್ಯೂಟ್‌ ಆಫ್‌ ನ್ಯಾಷನಲ್ ಇಂಪಾರ್ಟೆನ್ಸ್‌ನಲ್ಲಿ ಕ್ರಿಯಾತ್ಮಕ ಆಘಾತ ಚೇತರಿಕೆ ಕೇಂದ್ರ ಇದೆ. ಇಲ್ಲಿಗೆ ಅತಿ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಾರೆ. ಇದು ಆಸ್ಪತ್ರೆಯ ಭಾಗ ಆಗಿರುವುದರಿಂದ ಬೇರೆ ಬೇರೆ ಕಾಯಿಲೆಗಳವರೂ ಚಿಕಿತ್ಸೆಗೆ ಬರುತ್ತಾರೆ. ಹೀಗಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಬರುವುದಿಲ್ಲ. ಸಂತ್ರಸ್ತರಿಗೆ ಮುಜುಗರ ಆಗದಿರಲೆಂದು ನಾವು ಪ್ರತ್ಯೇಕ ಕೇಂದ್ರ ಆರಂಭಿಸಲು ತೀರ್ಮಾನಿಸಿದೆವು’ ಎಂದು ಹೇಳಿದರು.

ಕನ್ನಡ ಹೆಲ್ಪ್‌ಲೈನ್‌: ಮಹಿಳೆಯರಿಗೆ ಸಾಂತ್ವನ ಮತ್ತು ಸಲಹೆ– ಸೂಚನೆಗಳನ್ನು ನೀಡಲು ಟೋಲ್‌ಫ್ರೀ ಹೆಲ್ಪ್‌ಲೈನ್‌ ‘ಶಕ್ತಿ’ಯನ್ನು ಆರಂಭಿಸಲಾಗಿದೆ. ಇದು ಕನ್ನಡ ಭಾಷೆಯ ಹೆಲ್ಪ್‌ಲೈನ್‌ ಆಗಿದ್ದು, ಸಾಂತ್ವನ ಅಲ್ಲದೆ, ಕಾನೂನು ಸಲಹೆಗಳನ್ನೂ ಪಡೆದುಕೊಳ್ಳಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.