ADVERTISEMENT

‘ಸೌರ ವಿದ್ಯುತ್ ನೀತಿ’ ಬದಲು| 25 ಮೆಗಾವಾಟ್‌ ಉತ್ಪಾದನೆಗೆ ಅವಕಾಶ: ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 20:15 IST
Last Updated 6 ಸೆಪ್ಟೆಂಬರ್ 2019, 20:15 IST
   

ಬೆಂಗಳೂರು: ‘ಸೌರ ವಿದ್ಯುತ್ ನೀತಿ’ ಯನ್ನು ಬದಲಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಸೌರ ಪಾರ್ಕ್ ನಿರ್ಮಿಸಲು ಇದ್ದ ವಿದ್ಯುತ್ ಉತ್ಪಾದನೆಯ ಮಿತಿಯನ್ನು ಕಡಿತಗೊಳಿಸಿದೆ. ಉತ್ಪಾದಿಸಿದ ವಿದ್ಯುತ್‌ಅನ್ನು ಖಾಸಗಿಯವರಿಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು, ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ,ಪ್ರಸ್ತುತ ಸೌರ ಪಾರ್ಕ್ ನಿರ್ಮಿಸುವವರು ಕನಿಷ್ಠ 100 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಮಾಡಬೇಕಿತ್ತು. ಆದರೆ ಈಗ ಈ ಮಿತಿಯನ್ನು 25 ಮೆಗಾವಾಟ್‌ಗೆ ಇಳಿಸಲಾಗಿದೆ. ಸೌರ ವಿದ್ಯುತ್ ಘಟಕ ನಿರ್ಮಾಣ ಮಿತಿಯನ್ನು 18 ತಿಂಗಳಿಗೆ ಇಳಿಸಲಾಗಿದೆ. ಇದರಿಂದಾಗಿ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಲಿದ್ದು, ಮತ್ತಷ್ಟು ಮಂದಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

‘ಸೌರ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯೋಜನೆಯ ಒಟ್ಟು ಮೊತ್ತದಲ್ಲಿ ಶೇ 25ರಷ್ಟು ಸಬ್ಸಿಡಿ ನೀಡುತ್ತಿದೆ. ಕನಿಷ್ಠ 100 ಮೆ.ವಾ ವಿದ್ಯುತ್ ಉತ್ಪಾದಿಸುವಘಟಕ ಸ್ಥಾಪಿಸಬೇಕು ಎಂಬ ಷರತ್ತಿನಿಂದಾಗಿ ಹೆಚ್ಚು ಮಂದಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಉತ್ಪಾದನೆ ಮಿತಿಯನ್ನು ಸಡಿಲಗೊಳಿಸಿರುವುದರಿಂದ ರಾಜ್ಯದಲ್ಲಿ ಹೆಚ್ಚು ಸೌರ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ’ ಎಂದು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.