ADVERTISEMENT

3.37 ಲಕ್ಷ ಐಪಿ ಸೆಟ್‌ಗಳಿಗೆ ಸೌರವಿದ್ಯುತ್‌: ಸುನಿಲ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 20:10 IST
Last Updated 29 ಡಿಸೆಂಬರ್ 2022, 20:10 IST
   

ಬೆಳಗಾವಿ: ಪ್ರಧಾನಮಂತ್ರಿ ಕುಸುಮ್‌–ಸಿ ಯೋಜನೆಯಡಿ ರಾಜ್ಯದಲ್ಲಿ 3.37 ಲಕ್ಷರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್‌ ಫೀಡರ್‌ಗಳ ಮೂಲಕ ವಿದ್ಯುತ್‌ ಸಂಪರ್ಕ ಒದಗಿಸಲಾಗುವುದು ಎಂದು ಇಂಧನ ಸಚಿವ ವಿ.ಸುನಿಲ್‌ಕುಮಾರ್‌ ಹೇಳಿದರು.

ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಕೆ.ವೈ.ನಂಜೇಗೌಡಅವರ ಪ್ರಶ್ನೆಗೆ ಉತ್ತರಿಸಿ ಸಚಿವರು ಈ ವಿಷಯ ತಿಳಿಸಿದರು.

ಈಗಾಗಲೇ ಈ ಯೋಜನೆಗೆ ಟೆಂಡರ್‌ ಕರೆಯಲಾಗಿದ್ದು, 1,300 ಮೆಗಾವಾಟ್‌ ಸಾಮರ್ಥ್ಯದ ವಿದ್ಯುತ್‌ ಸೋಲಾರ್‌ ಫೀಡರ್‌ಗಳ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗುವುದು ಎಂದರು.

ADVERTISEMENT

ಅಲ್ಲದೇ, 12,03,887 ಕೃಷಿ ಪಂಪ್‌ಸೆಟ್‌ಗೆ ಅಕ್ರಮ– ಸಕ್ರಮ ಯೋಜನೆಯಡಿ ಅರ್ಜಿ ಹಾಕಿದ್ದಾರೆ. ಇದರಲ್ಲಿ 66,086 ಮಂದಿಗೆ ವಿದ್ಯುತ್‌ ಸಂಪರ್ಕ ಒದಗಿಸುವುದಕ್ಕೆ ಟೆಂಡರ್‌ ಆಗಿದ್ದು, ತಕ್ಷಣವೇ ಸಕ್ರಮ ಮಾಡಿಕೊಡಲಾಗುವುದು. ಉಳಿದವುಗಳನ್ನು ಮುಂದಿನ ಹಂತದಲ್ಲಿ ಒದಗಿಸಲಾಗುವುದು ಎಂದು ಸುನಿಲ್‌ಕುಮಾರ್‌ ಅವರು ಜೆಡಿಎಸ್‌ನ ವೀರಭದ್ರಯ್ಯ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ ಒಟ್ಟು 32.55 ಲಕ್ಷ ಕೃಷಿ ಪಂಪ್‌ಸೆಟ್‌ಗಳಿವೆ. 1,900 ಮೆಗಾವಾಟ್‌ ವಿದ್ಯುತ್‌ ಪ್ರತಿದಿನ ಇದಕ್ಕೆ ವಿನಿಯೋಗ ಆಗುತ್ತಿದೆ. ಇದಕ್ಕೆ ₹13,632 ಕೋಟಿ ಸಬ್ಸಿಡಿಯನ್ನು ರೈತರಿಗೆ ನೀಡಲಾಗುತ್ತಿದೆ ಎಂದೂ ಹೇಳಿದರು.

ತತ್ಕಾಲ್‌ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಪಡೆಯಲು 71,115 ರೈತರು ಅರ್ಜಿ ಸಲ್ಲಿಸಿದ್ದಾರೆ. ಮೊದಲ ಹಂತದಲ್ಲಿ 2,014 ರೈತರಿಗೆ ವಿದ್ಯುತ್‌ ಸಂಪರ್ಕ ಒದಗಿಸಲಾಗುವುದು ಎಂದು ಹೇಳಿದರು.

ತತ್ಕಾಲ್‌ ಸೇವೆಯಡಿ ಪ್ರತಿ ರೈತ ₹10 ಸಾವಿರ ಪಾವತಿಸಬೇಕು, ರಾಜ್ಯ ಸರ್ಕಾರ ಪ್ರತಿ ರೈತನಿಗೂ ₹1.50 ಲಕ್ಷ ವ್ಯಯಿಸುತ್ತದೆ. ಈವರೆಗೆ 68 ಸಾವಿರ ರೈತರು ತತ್ಕಾಲ್ ಸೇವೆಯಡಿ ತಲಾ ₹10 ಸಾವಿರ ಪಾವತಿ ಮಾಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.