ADVERTISEMENT

ಫಿಟ್ಟರ್, ಹಮಾಲಿ ಹುದ್ದೆಗೆ ಎಂ.ಟೆಕ್, ಎಂಬಿಎ ಪದವೀಧರರು!

* ನೈರುತ್ಯ ರೈಲ್ವೆ ‘ಡಿ’ ವೃಂದದ ಹುದ್ದೆ * ಶೇ 1 ರಷ್ಟು ಕನ್ನಡಿಗರು ಆಯ್ಕೆ * ಹೊರರಾಜ್ಯದವರ ಪಾರುಪತ್ಯ

ರಾಜೇಶ್ ರೈ ಚಟ್ಲ
Published 22 ಆಗಸ್ಟ್ 2019, 20:15 IST
Last Updated 22 ಆಗಸ್ಟ್ 2019, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನೈರುತ್ಯ ರೈಲ್ವೆಯಲ್ಲಿ ಖಾಲಿ ಇರುವ ‘ಡಿ’ ವೃಂದದ 2,200 ಹುದ್ದೆಗಳಿಗೆ ನೇಮಕಾತಿ ನಡೆದಿದ್ದು, ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಕನ್ನಡಿಗರ ಸಂಖ್ಯೆ ಶೇ 1ರಷ್ಟು ಮಾತ್ರ!

ಅಷ್ಟೇ ಅಲ್ಲ, ಕೇವಲ ಎಸ್ಎಸ್ಎಲ್‌ಸಿ ವಿದ್ಯಾರ್ಹತೆ ಅಗತ್ಯವಿರುವ ಫಿಟ್ಟರ್‌, ವೆಲ್ಡರ್‌, ಟ್ರ್ಯಾಕ್‌ಮನ್‌, ಖಲಾಸಿ ಹೆಲ್ಪರ್‌, ಪಾಯಿಂಟ್‌ ಮೆನ್‌ ಕಂ ಹಮಾಲಿ ಸೇರಿದಂತೆ ಕೆಳದರ್ಜೆಯ ಈ ಹುದ್ದೆಗಳನ್ನು ಎಂ.ಟೆಕ್, ಎಂ.ಬಿ.ಎ, ಬಿ.ಟೆಕ್, ಬಿ.ಇ ಓದಿರುವ ಹೊರರಾಜ್ಯದ ಅಭ್ಯರ್ಥಿಗಳು ಗಿಟ್ಟಿಸಿಕೊಂಡಿದ್ದಾರೆ.

ಅದರಲ್ಲೂ, ಕರ್ನಾಟಕ ಬಿಟ್ಟರೆ ದಕ್ಷಿಣ ಭಾರತದ ರಾಜ್ಯಗಳ ಪೈಕಿ, ಕೇರಳ ಮತ್ತು ಆಂಧ್ರಪ್ರದೇಶದಿಂದ ಮಾತ್ರ ಬೆರಳೆಣಿಕೆಯ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಉಳಿದಂತೆ, ಆಯ್ಕೆಯಾಗಿರುವ ಬಹುತೇಕ ಅಭ್ಯರ್ಥಿಗಳು ಬಿಹಾರ, ರಾಜಸ್ಥಾನ, ಉತ್ತರಪ್ರದೇಶದವರು. ಪಶ್ಚಿಮ ಬಂಗಾಳದವರೂ ಇದ್ದಾರೆ. ಸಾಮಾನ್ಯ ಮತ್ತು ಹಿಂದುಳಿದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಶೇ 80ರಷ್ಟು ಮಂದಿ ಬಿಹಾರದವರು. ಪರಿಶಿಷ್ಟ ವರ್ಗಕ್ಕೆ ಮೀಸಲಾದ ಹುದ್ದೆಗಳಿಗೆ ಉತ್ತರಪ್ರದೇಶದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ನೈರುತ್ಯ ರೈಲ್ವೆಯ ಮೂಲಗಳು ತಿಳಿಸಿವೆ.

ADVERTISEMENT

ನೈರುತ್ಯ ರೈಲ್ವೆಯಲ್ಲಿ ಮೂರು (ಹುಬ್ಬಳ್ಳಿ, ಬೆಂಗಳೂರು, ಮೈಸೂರು) ವಿಭಾಗಗಳಿದ್ದು ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿಯಿದೆ. ‘ಡಿ’ ವೃಂದದ ಹುದ್ದೆಗಳಿಗೆ ಸ್ಥಳೀಯರಿಗೆ (ಕನ್ನಡಿಗರಿಗೆ) ಉದ್ಯೋಗ ನೀಡಬೇಕೆಂಬ ಉದ್ದೇಶದಿಂದ ರೈಲ್ವೆ ನೇಮಕಾತಿ ಕೋಶ (ಆರ್‌ಆರ್‌ಸಿ) ಆರಂಭಿಸಲಾಗಿದೆ. ಈ ಮೂರು ವಿಭಾಗಗಳು ಮತ್ತು ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿರುವ ವರ್ಕ್‌ಶಾಪ್‌ಗಳಿಗೆ ಟ್ರ್ಯಾಕ್‌ಮನ್‌, ಖಲಾಸಿ ಹೆಲ್ಪರ್‌ (ಮೆಕಾನಿಕಲ್‌, ಎಲೆಕ್ಟ್ರಿಕಲ್‌, ಸಿಗ್ನಲ್‌). ಟ್ರ್ಯಾಕ್‌ಮೆನ್‌, ಪಾಯಿಂಟ್‌ ಮೆನ್‌ ಕಂ ಹಮಾಲ, ಆಪರೇಟಿಂಗ್‌ ಆ್ಯಂಡ್‌ ಕಮರ್ಷಿಯಲ್‌ ಪೋರ್ಟರ್, ಸಫಾಯಿವಾಲ ಹುದ್ದೆಗಳಿಗೆ ಆರ್‌ಆರ್‌ಸಿ ಮೂಲಕ ನೇಮಕಾತಿ ನಡೆಯುತ್ತದೆ.

2013ರಲ್ಲಿ ಕೊನೆಯ ಬಾರಿಗೆ ಈ ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. ಹುಬ್ಬಳ್ಳಿಯಲ್ಲೇ ಪ್ರಶ್ನೆಪತ್ರಿಕೆ ಸಿದ್ಧವಾಗಿತ್ತು. ಆನ್‌ಲೈನ್‌ ಪರೀಕ್ಷಾ ವ್ಯವಸ್ಥೆ ಕೂಡಾ ಇರಲಿಲ್ಲ. ಹುಬ್ಬಳ್ಳಿ, ಮೈಸೂರು, ಬೆಂಗಳೂರು ಮತ್ತು ಗೋವಾದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಆಯ್ಕೆಯಾಗಿದ್ದರು.

ಆದರೆ, ನಂತರ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆ ಜಾರಿಗೆ ಬಂದಿದೆ. ಅಖಿಲ ಭಾರತ ಮಟ್ಟದಲ್ಲಿ ಆನ್‌ಲೈನ್‌ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಯುವುದರಿಂದ ದೇಶದ ಯಾವುದೇ ಮೂಲೆಯಿಂದಲೂ ಪರೀಕ್ಷೆ ಬರೆಯಲು ಅವಕಾಶವಿದೆ. ಹೀಗಾಗಿ, ಈ ಬಾರಿ ಕೆಳದರ್ಜೆ ಹುದ್ದೆಗಳಿಗೆ ಹೊರರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಹಿಂದಿ ವಲಯದಲ್ಲಿ ಪ್ರಶ್ನೆ ಪರೀಕ್ಷೆ ಸಿದ್ಧವಾಗುತ್ತಿರುವುದೂ ಕನ್ನಡಿಗರು ಅತಿ ಕಡಿಮೆ ಸಂಖ್ಯೆಯಲ್ಲಿ ಆಯ್ಕೆಯಾಗಲು ಕಾರಣ ಇರಬೇಕು’ ಎಂದೂ ಮೂಲಗಳು ಹೇಳಿವೆ.

ಎಂ.ಟೆಕ್ ಓದಿದವರ ಕೈಗೆ ಸುತ್ತಿಗೆ, ಚೀಲ!
ಪಾಯಿಂಟ್‌ಮನ್‌ ಹುದ್ದೆಗೆ ಆಯ್ಕೆಯಾದವರಿಗೆ ಧಾರವಾಡ ಮತ್ತು ಮೈಸೂರು, ಟ್ರ್ಯಾಕ್‌ಮನ್ ಹುದ್ದೆಗೆ ಬೆಂಗಳೂರು ಮತ್ತು ಧಾರವಾಡ, ಫಿಟ್ಟರ್‌ ಹುದ್ದೆಗೆ ಬೆಂಗಳೂರು, ಮೈಸೂರು ಮತ್ತು ಧಾರವಾಡದಲ್ಲಿ ತರಬೇತಿ ನೀಡಲಾಗುತ್ತದೆ. ಎಂ.ಟೆಕ್ ಓದಿರುವ ಕೇರಳದ ಮೂವರು ಯುವತಿಯರೂ ಸೇರಿದಂತೆ ಹಲವು ಯುವತಿಯರು ಟ್ರ್ಯಾಕ್‌ಮನ್ ಹುದ್ದೆಗೆ ಆಯ್ಕೆಯಾಗಿ, ಸದ್ಯ ತರಬೇತಿ ಪಡೆಯುತ್ತಿದ್ದಾರೆ.

‘ಟ್ರ್ಯಾಕ್‌ಮನ್‌ಗಳು ಚೀಲ ಹೆಗಲಿಗೇರಿಸಿ, ಸುತ್ತಿಗೆ ಕೈಯಲ್ಲಿ ಹಿಡಿದುಕೊಂಡು ಟ್ರ್ಯಾಕ್‌ನಲ್ಲಿ (ಹಳಿ) ನಡೆದಾಡಬೇಕು. ಪಾಯಿಂಟ್ ಮನ್‌ ಹುದ್ದೆಗೆ ಬಂದವರು ರೈಲಿನ ಮುಂಭಾಗದಲ್ಲಿ ನಿಂತು ಹಸಿರು ಧ್ವಜ ಬೀಸಬೇಕು. ಕ್ಲ್ಯಾಪ್‌ ಹೊಡೆಯುವುದು, ಗೇಟ್‌ ಹಾಕುವ ಕೆಲಸವನ್ನೂ ಮಾಡಬೇಕು’ ಎಂದು ನೈರುತ್ಯ ರೈಲ್ವೆಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.