ADVERTISEMENT

ಪತನದತ್ತ ಕುಮಾರ ಸರ್ಕಾರ | ಸಭಾಧ್ಯಕ್ಷರ ನಿರ್ಧಾರದತ್ತ ಎಲ್ಲರ ಚಿತ್ತ

ಸಾಲಿಸಿಟರ್‌ ಜನರಲ್ ಜತೆ ರಾಜ್ಯಪಾಲರ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 20:00 IST
Last Updated 8 ಜುಲೈ 2019, 20:00 IST
ಮೈತ್ರಿ ಸರ್ಕಾರದ ಶಾಸಕರು ಮತ್ತು ಸಚಿವರು ನಗರದ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಸಭೆ ಮುಗಿಸಿಕೊಂಡು ಬಸ್‌ನಲ್ಲಿ ರೆಸಾರ್ಟ್‌ಗೆ ತೆರಳಿದರು - –ಪ್ರಜಾವಾಣಿ ಚಿತ್ರ
ಮೈತ್ರಿ ಸರ್ಕಾರದ ಶಾಸಕರು ಮತ್ತು ಸಚಿವರು ನಗರದ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಸಭೆ ಮುಗಿಸಿಕೊಂಡು ಬಸ್‌ನಲ್ಲಿ ರೆಸಾರ್ಟ್‌ಗೆ ತೆರಳಿದರು - –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕ್ಷಣದಿಂದ ಕ್ಷಣಕ್ಕೆ ಪತನದತ್ತ ಸಾಗುತ್ತಿರುವುದು ನಿಚ್ಚಳವಾಗುತ್ತಿದ್ದು, ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು ಮಿತ್ರಕೂಟದ ನಾಯಕರು ಕೊನೆಹಂತದ ಪ್ರಯತ್ನವನ್ನು ನಡೆಸಿದ್ದಾರೆ.

ಕಾಂಗ್ರೆಸ್‌ನ 10, ಜೆಡಿಎಸ್‌ನ 3 ಶಾಸಕರು ರಾಜೀನಾಮೆ ನೀಡಿ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಈ ಬೆನ್ನಲ್ಲೇ, ಈಚೆಗಷ್ಟೆ ಸಂಪುಟಕ್ಕೆ ಸೇರ್ಪಡೆಯಾಗಿದ್ದ ಇಬ್ಬರು ಪಕ್ಷೇತರರು, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂಬೈನಲ್ಲಿರುವ ಬಂಡಾಯದ ಗುಂಪನ್ನು ಸೇರಿಕೊಂಡಿದ್ದಾರೆ. ಇದರೊಂದಿಗೆ ಬಿಜೆಪಿಯ ಬಲ ಹೆಚ್ಚತೊಡಗಿದ್ದು, ಮೈತ್ರಿ ಸರ್ಕಾರ ಅಲ್ಪಮತಕ್ಕೆ ಇಳಿಯುತ್ತಿದೆ.

ಶಾಸಕರು ನೀಡಿರುವ ರಾಜೀನಾಮೆ ಪತ್ರಗಳನ್ನು ಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್ ಮಂಗಳವಾರ ಪರಿಶೀಲನೆ ನಡೆಸಲಿದ್ದು, ಎಲ್ಲರ ಚಿತ್ತ ಅವರ ಮುಂದಿನ ನಡೆಯತ್ತ ಕೇಂದ್ರೀಕೃತವಾಗಿದೆ. ರಾಜೀನಾಮೆ ಅಂಗೀಕರಿಸಲಿದ್ದಾರೋ ಅಥವಾ ತಿರಸ್ಕರಿಸಲಿದ್ದಾರೋ ಅಥವಾ ವಿಚಾರಣೆಗೆ ಒಳಪಡಿಸಲು ನೋಟಿಸ್ ನೀಡಲಿದ್ದಾರೆಯೋ ಎಂಬ ಕುತೂಹಲ ಮೂಡಿದೆ.

ADVERTISEMENT

ಸಭಾಧ್ಯಕ್ಷರ ನಡೆ ಸರ್ಕಾರಕ್ಕೆ ‘ಜೀವದಾನ’ ಮಾಡಲಿದೆ ಎಂಬ ವಿಶ್ವಾಸ ಮೈತ್ರಿಕೂಟದ ನಾಯಕರಲ್ಲಿದೆ. ಆದರೆ, ಸಭಾಧ್ಯಕ್ಷರು ರಾಜೀನಾಮೆಯನ್ನು ಅಂಗೀಕರಿಸಲಿದ್ದಾರೆ ಎಂಬ ನಂಬಿಕೆ ಬಿಜೆಪಿ ಪಾಳಯದಲ್ಲಿದೆ.

ಶಾಸಕರ ರಾಜೀನಾಮೆ ಹಾಗೂ ಪಕ್ಷೇತರರು ಬಿಜೆಪಿ ಕಡೆ ವಾಲಿರುವುದರಿಂದ ಮೈತ್ರಿಕೂಟವು ಬಲ ಕಳೆದುಕೊಳ್ಳುತ್ತಲೇ ಇದೆ. 224 ಶಾಸಕರ ‍ಪೈಕಿ 13 ಶಾಸಕರು ನೀಡಿರುವ ರಾಜೀನಾಮೆ ಅಂಗೀಕಾರವಾದರೆ ಮೈತ್ರಿ ಬಲ 104ಕ್ಕೆ ಕುಸಿಯಲಿದೆ. ಬಿಎಸ್‌ಪಿಯ ಮಹೇಶ್‌, ಸದ್ಯ ಮಿತ್ರಕೂಟದ ಜತೆಗೆ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಸಂಖ್ಯೆ 105 ಇದ್ದು, ಪಕ್ಷೇತರರ ಬಲ ಸೇರಿ 107ಕ್ಕೇರಿದೆ. ರಾಜೀನಾಮೆ ಕೊಟ್ಟಿರುವ ಶಾಸಕರು ಅನರ್ಹಗೊಂಡರೆ ಅಥವಾ ಅದು ಅಂಗೀಕಾರವಾದರೆ ಸರ್ಕಾರ ರಚಿಸುವಷ್ಟು ಬಲ ಸಿಗಲಿದೆ ಎಂಬ ಭರವಸೆ ಕಮಲ ಪಕ್ಷದ ನಾಯಕರದ್ದಾಗಿದೆ.

ಏತನ್ಮಧ್ಯೆ, ಸೋಮವಾರ ಮಧ್ಯಾಹ್ನ ರಾಜ್ಯಪಾಲ ವಜುಭಾಯಿ ವಾಲಾ ಅವರು, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ಅವರನ್ನು ಕರೆಸಿಕೊಂಡು ಅರ್ಧತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಮುಂದೆ ಕೈಗೊಳ್ಳಬೇಕಾದ ಕಾನೂನಾತ್ಮಕ ನಡೆಗಳ ಬಗ್ಗೆ ಸಲಹೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೋಸ್ತಿಗಳ ಕಸರತ್ತು

ಬಿಜೆಪಿ ‘ಆಪರೇಷನ್‌’ನಿಂದ ಕಂಗೆಟ್ಟಿರುವ ಮಿತ್ರಕೂಟದ ನಾಯಕರು ಕೊನೆಗಳಿಗೆಯಲ್ಲಿ ಸರ್ಕಾರ ಉಳಿಸಿಕೊಳ್ಳುವ ಯತ್ನಗಳನ್ನು ನಡೆಸಿದ್ದಾರೆ. ಸರಣಿ ಸಭೆ ನಡೆಸಿದ ನಾಯಕರು ಮೊದಲ ಹಂತವಾಗಿ ಎರಡೂ ಪಕ್ಷಗಳನ್ನು ಪ್ರತಿನಿಧಿಸುವ ಸಚಿವರಿಂದ ರಾಜೀನಾಮೆ ಪಡೆದುಕೊಂಡಿದ್ದಾರೆ. ರಾಜೀನಾಮೆ ಕೊಟ್ಟಿರುವ ಶಾಸಕರಿಗೆ ಸಚಿವ ಸ್ಥಾನದ ಆಸೆ ತೋರಿಸಿ, ‘ಕಮಲ’ದ ಹಿಡಿತದಿಂದ ಅವರನ್ನು ಕರೆತರುವುದು ನಾಯಕರ ಆಲೋಚನೆ.

ಈ ನಿಟ್ಟಿನಲ್ಲಿ ಶಾಸಕರನ್ನು ಸಂಪರ್ಕಿಸುವ ಯತ್ನವನ್ನು ಪಕ್ಷದ ನಾಯಕರು ಮಾಡಿದರು. ಆದರೆ, ಹೊರಗೆ ಕಾಲಿಟ್ಟಿರುವ ಶಾಸಕರು ಪಕ್ಷದ ನಾಯಕರ ಆಮಿಷಗಳಿಗೆ ಬಗ್ಗಲಿಲ್ಲ ಎನ್ನಲಾಗಿದೆ

‘ಈಗಾಗಲೇ ಕೊನೆಯ ಘಟ್ಟ ತಲುಪಿದ್ದೇವೆ. ಈ ಹಂತದಲ್ಲಿ ಸರ್ಕಾರ ಉಳಿಸಿಕೊಳ್ಳುವುದು ಕಷ್ಟ. ಸಚಿವರೆಲ್ಲರೂ ರಾಜೀನಾಮೆ ನೀಡಿ ಪ್ರಯತ್ನ ನಡೆಸಿದರೂ ರಾಜೀನಾಮೆ ಕೊಟ್ಟ ಶಾಸಕರು ಬಗ್ಗಲೇ ಇಲ್ಲ. ನಮ್ಮೆಲ್ಲ ಪ್ರಯತ್ನವೂ ವಿಫಲವಾಯಿತು’ ಎಂದು ಬಿಂಬಿಸುವ ಉದ್ದೇಶದಿಂದ ಈ ನಡೆಯನ್ನು ಮಿತ್ರಕೂಟದ ನಾಯಕರ ಕೈಗೊಂಡರು ಎಂದೂ ಹೇಳಲಾಗುತ್ತಿದೆ.

ಈ ತಂತ್ರದ ಜತೆಗೆ, ‘ತಮಿಳುನಾಡು ಮಾದರಿ’ ಅನುಸರಿಸಿ ಪಕ್ಷಾಂತರ ನಿಷೇಧ ಕಾಯಿದೆಯಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡು ರಾಜೀನಾಮೆ ನೀಡಿದವರ ಶಾಸಕತ್ವ ಅನರ್ಹಗೊಳಿಸುವಂತೆ ಸಭಾಧ್ಯಕ್ಷರ ಮೇಲೆ ಒತ್ತಡ ತರಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಹಿಂದೆ ಇಂತಹ ಪರಿಸ್ಥಿತಿಯಲ್ಲಿ ಸಭಾಧ್ಯಕ್ಷರು ಕೈಗೊಂಡಿರುವ ನಿರ್ಧಾರಗಳು, ಹೈಕೋರ್ಟ್, ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪರಾಮರ್ಶೆ ನಡೆಸಿದ್ದು, ದಾಖಲೆಸಹಿತ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ಪಕ್ಷೇತರರೂ ಯೂ ಟರ್ನ್

ಕಳೆದ ತಿಂಗಳಷ್ಟೇ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಮುಳಬಾಗಲು ಶಾಸಕ ಎಚ್.ನಾಗೇಶ್ ಹಾಗೂ ರಾಣೆ ಬೆನ್ನೂರು ಶಾಸಕ ಆರ್.ಶಂಕರ್ ಸೋಮವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಡಾ.ಪರಮೇಶ್ವರ ಅವರ ಮನೆಯಲ್ಲಿ ಏರ್ಪಡಿಸಲಾಗಿದ್ದ ಉಪಾಹಾರ ಕೂಟದಲ್ಲಿ ಶಂಕರ್‌ ಭಾಗವಹಿಸಿದ್ದರು.

ಸಭಾಧ್ಯಕ್ಷರ ಮುಂದಿರುವ ಆಯ್ಕೆ

* ಮೇಲ್ನೋಟಕ್ಕೆ ಸರಿ ಎನಿಸಿದರೆ ರಾಜೀನಾಮೆ ಅಂಗೀಕರಿಸುವುದು

* ಶಾಸಕರು ಒತ್ತಡ, ಆಮಿಷಕ್ಕೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟವಾದರೆ ತಿರಸ್ಕರಿಸುವುದು

* ಪ್ರತಿಯೊಬ್ಬರನ್ನೂ ಕರೆದು ವಿವರಣೆ ಪಡೆಯುವುದು

* ಪಕ್ಷಾಂತರ ನಿಷೇಧ ಕಾಯ್ದೆ ಮುಂದಿಟ್ಟುಕೊಂಡು ಅನರ್ಹಗೊಳಿಸುವುದು

ಬಿಜೆಪಿ ಸೇರುವೆ; ರೋಷನ್‌ ಬೇಗ್

ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಶಿವಾಜಿನಗರ ಶಾಸಕ ರೋಷನ್‌ಬೇಗ್ ಬಿಜೆಪಿ ಸೇರುವುದಾಗಿ ತಿಳಿಸಿದ್ದಾರೆ.

‘ಶಾಸಕ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡುತ್ತಿದ್ದು, ನಂತರ ಬಿಜೆಪಿ ಸೇರುತ್ತೇನೆ. ಕಾಂಗ್ರೆಸ್ ಪಕ್ಷ ನಡೆಸಿಕೊಂಡ ರೀತಿಯಿಂದಾಗಿ ನೋವಾಗಿದ್ದು, ಪಕ್ಷ ತೊರೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರನ್ನು ನಿರ್ಲಕ್ಷ್ಯಿಸಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಪ್ರಮುಖ ಕಾರಣ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಇಂದು ಮತ್ತಷ್ಟು ಶಾಸಕರ ರಾಜೀನಾಮೆ

ಕಾಂಗ್ರೆಸ್‌, ಜೆಡಿಎಸ್‌ನ ಮತ್ತಷ್ಟು ಶಾಸಕರು ಮಂಗಳವಾರ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಮವಾರವೇ ಶಾಸಕರು ರಾಜೀನಾಮೆ ನೀಡಬೇಕಿದ್ದು, ಸಭಾಧ್ಯಕ್ಷರು ಕಚೇರಿಯಲ್ಲಿ ಇಲ್ಲದ ಕಾರಣ ರಾಜೀನಾಮೆ ನೀಡಲಿಲ್ಲ ಎನ್ನಲಾಗಿದೆ.

ಎಂ.ಟಿ.ಬಿ.ನಾಗರಾಜ್ (ಹೊಸಕೋಟೆ), ಸೌಮ್ಯಾರೆಡ್ಡಿ (ಜಯನಗರ), ಗಣೇಶ ಹುಕ್ಕೇರಿ (ಚಿಕ್ಕೋಡಿ), ಅಂಜಲಿ ನಿಂಬಾಳಕರ (ಖಾನಾಪುರ), ಬಸವರಾಜ ದದ್ದಲ (ರಾಯಚೂರು ಗ್ರಾಮೀಣ), ಎಸ್.ಎನ್.ಸುಬ್ಬಾರೆಡ್ಡಿ (ಬಾಗೇಪಲ್ಲಿ), ಎಸ್.ಎನ್.ನಾರಾಯಣಸ್ವಾಮಿ (ಬಂಗಾರಪೇಟೆ), ಕೆ.ಶ್ರೀನಿವಾಸಗೌಡ (ಕೋಲಾರ) ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

***

* ಕುಮಾರಸ್ವಾಮಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ‌ ಕೊಡಲಿ

ಬಿ.ಎಸ್‌.ಯಡಿಯೂರಪ್ಪ,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

* ನಾನು ರಾಜಕೀಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ

ಎಚ್.ಡಿ.ಕುಮಾರಸ್ವಾಮಿ,ಮುಖ್ಯಮಂತ್ರಿ

* ಆಪರೇಷನ್ ಕಮಲ ಮಾಡುತ್ತಿಲ್ಲವೆಂದು ಹೊಸ ನಾಟಕ ಆಡುತ್ತಿದ್ದಾರೆ

ಸಿದ್ದರಾಮಯ್ಯ,ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅದ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.