ಪೊಲೀಸ್ ಠಾಣೆ(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ವಿಶೇಷ ಪೊಲೀಸ್ ಠಾಣೆ ಮಾನ್ಯತೆ ಲಭಿಸಿದ ಬೆನ್ನಲ್ಲೇ ರಾಜ್ಯದಲ್ಲಿ 33 ಠಾಣೆಗಳು ಕಾರ್ಯಾರಂಭ ಮಾಡಿವೆ.
ಬೆಂಗಳೂರಿನಲ್ಲಿ ಎರಡು, ಪ್ರತಿ ಜಿಲ್ಲೆಗೆ ಒಂದರಂತೆ ಒಟ್ಟು 33 ವಿಶೇಷ ಪೊಲೀಸ್ ಠಾಣೆಗಳು ಏಪ್ರಿಲ್ 14ರಿಂದ ಕೆಲಸ ಆರಂಭಿಸಿವೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವುದು, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸುವುದು, ಅನ್ಯಾಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯ ಕಲ್ಪಿಸುವ ಉದ್ದೇಶದಿಂದ ಈ ಠಾಣೆಗಳನ್ನು ಸ್ಥಾಪಿಸಲಾಗಿದೆ.
ಈವರೆಗೂ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳಲ್ಲಿಯೇ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳೂ ದಾಖಲಾಗುತ್ತಿದ್ದವು. ಆ ಠಾಣೆಗಳಲ್ಲಿ ಇತರೆ ಪ್ರಕರಣಗಳ ತನಿಖೆಯನ್ನೂ ನಡೆಸಬೇಕಿದ್ದರಿಂದ ದೌರ್ಜನ್ಯ ಪ್ರಕರಣದ ತನಿಖೆ ವಿಳಂಬ ಆಗುತ್ತಿತ್ತು. ಹಾಗಾಗಿ ಕಳೆದ 12 ವರ್ಷಗಳಲ್ಲಿ (2012–2024) ದೌರ್ಜನ್ಯಕ್ಕೆ ಸಂಬಂಧಿಸಿದ 28,400 ಪ್ರಕರಣಗಳು ದಾಖಲಾಗಿದ್ದರೂ 704 ಪ್ರಕರಣಗಳಲ್ಲಿ ಮಾತ್ರವೇ ಆರೋಪಿಗಳಿಗೆ ಶಿಕ್ಷೆ ಆಗಿದೆ. ಶಿಕ್ಷೆಯ ಪ್ರಮಾಣ ಶೇ 2.47ರಷ್ಟಿದೆ.
ಎಫ್‌ಐಆರ್ ದಾಖಲಿಸಿಕೊಂಡು ತನಿಖೆ:
ರಾಜ್ಯದ ಇತರೆ ಠಾಣೆಗಳಲ್ಲಿ ದಾಖಲಾಗುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನೂ ವರ್ಗಾವಣೆ ಮಾಡಿಕೊಂಡು ತನಿಖೆ ನಡೆಸಲಾಗುವುದು. ಜತೆಗೆ, ಈಗ ಡಿಸಿಆರ್‌ಇ ಘಟಕಗಳಿಗೆ ವಿಶೇಷ ಪೊಲೀಸ್ ಠಾಣೆ ಮಾನ್ಯತೆ ಲಭಿಸಿರುವ ಕಾರಣ, ಎಫ್‌ಐಆರ್ ದಾಖಲಿಸುವ ಅಧಿಕಾರವೂ ದತ್ತವಾಗಿದೆ. ಈ ಠಾಣೆಯ ಅಧಿಕಾರಿಗಳೇ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರ್ಯ ನಿರ್ವಹಣೆ?:
ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು ಸಮೀಪದ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ತೆರಳಿ ದೂರು ನೀಡಬಹುದು. ಅಲ್ಲದೇ, ಜಿಲ್ಲಾ ಕೇಂದ್ರಗಳಲ್ಲಿ ಡಿಸಿಆರ್‌ಇ ವಿಶೇಷ ಠಾಣೆಯನ್ನೂ ಸಂಪರ್ಕಿಸಬಹುದು. ದೂರು ಆಧರಿಸಿ ಠಾಣಾಧಿಕಾರಿ (ಎಸ್ಎಚ್‌ಒ) ತಕ್ಷಣ ಎಫ್‌ಐಆರ್ (ಪ.ಜಾ ಹಾಗೂ ಪ.ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ–1989 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023) ದಾಖಲಿಸಬೇಕು.
ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಠಾಣಾಧಿಕಾರಿ ಅವರು ಬೆಂಗಳೂರಿನಲ್ಲಿರುವ ಡಿಸಿಆರ್‌ಇ ಕೇಂದ್ರ ಕಚೇರಿಯ ‘ಕಂಟ್ರೋಲ್ ರೂಂ’ ಹಾಗೂ ಆಯಾ ಜಿಲ್ಲಾ ವರಿಷ್ಠಾಧಿಕಾರಿಗೆ ಮಾಹಿತಿ ಒದಗಿಸಬೇಕು.
ಬಳಿಕ ತನಿಖಾಧಿಕಾರಿ ನೇಮಕ ಆಗಲಿದ್ದಾರೆ. ತನಿಖೆ ವೇಳೆ ಆರೋಪಿಗಳ ಬಂಧನಕ್ಕೆ ಅಗತ್ಯಬಿದ್ದರೆ ಹೆಚ್ಚಿನ ಸಿಬ್ಬಂದಿಯನ್ನೂ ತನಿಖಾಧಿಕಾರಿಗೆ ಒದಗಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
‘ಪ್ರಕರಣ ದಾಖಲು, ತನಿಖೆ ಸೇರಿದಂತೆ ವಿವಿಧ ಪ್ರಕ್ರಿಯೆ ಪಾಲಿಸಲು ನಿರ್ಲಕ್ಷ್ಯ ವಹಿಸಿದ ಅಧಿಕಾರಿಯ ವಿರುದ್ಧವೂ ಕ್ರಮ ಆಗಲಿದೆ’ ಎಂದು ಎಚ್ಚರಿಸಲಾಗಿದೆ.
55 ಪ್ರಕರಣ ದಾಖಲು
ವಿಶೇಷ ಠಾಣೆಗಳು ಕಾರ್ಯಾರಂಭ ಮಾಡಿದ ಬಳಿಕ ದೌರ್ಜನ್ಯ ಘಟನೆಗಳಿಗೆ ಸಂಬಂಧಿಸಿದಂತೆ ವಿವಿಧ ಠಾಣೆಗಳಲ್ಲಿ 55 ಪ್ರಕರಣಗಳು ದಾಖಲಾಗಿವೆ. ವಿಶೇಷ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲು ನೆರವಾಗುವ ತಂತ್ರಾಂಶದ ಕೆಲಸ ಪ್ರಗತಿಯಲ್ಲಿದೆ. ಠಾಣೆಯಲ್ಲಿರುವ ಕಂಪ್ಯೂಟರ್ ಗಳಿಗೆ ತಂತ್ರಾಂಶ ಅಳವಡಿಸಿದ ಬಳಿಕ ಎಲ್ಲ ಪ್ರಕರಣಗಳನ್ನೂ ವಿಶೇಷ ಠಾಣೆಗೇ ವರ್ಗಾವಣೆ ಮಾಡಿಕೊಂಡು, ತನಿಖೆ ನಡೆಸ ಲಾಗುವುದು ಎಂದು ಮೂಲಗಳು ತಿಳಿಸಿವೆ.
‘ಕಂಟ್ರೋಲ್ ರೂಂ’ ಸ್ಥಾಪನೆ ಕೆಲಸ
ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಡಿಸಿಆರ್‌ಇ ಕಚೇರಿಯಲ್ಲಿ ‘ಕಂಟ್ರೋಲ್ ರೂಂ’ ಸ್ಥಾಪನೆಯ ಕೆಲಸಗಳು ನಡೆಯುತ್ತಿವೆ. ‘ಡಿಸಿಆರ್‌ಇ ಕಚೇರಿಯಲ್ಲಿ ‘ಕಂಟ್ರೋಲ್ ರೂಂ’ ಇರಲಿಲ್ಲ. ಹೊಸದಾಗಿ ಸ್ಥಾಪನೆ ಮಾಡಲಾಗುತ್ತಿದೆ. ಇದು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಠಾಣೆಗಳಲ್ಲಿ ದಾಖಲಾಗುವ ದೌರ್ಜನ್ಯ ಪ್ರಕರಣಗಳ ಮಾಹಿತಿಯನ್ನು ಎಸ್‌ಎಚ್‌ಒಗಳು ಈ ಕಂಟ್ರೋಲ್ ರೂಂಗೆ ನೀಡಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.