ADVERTISEMENT

ಕುಟುಂಬ ನಿರ್ವಹಣೆಗೆ ಸ್ತ್ರೀ ಯೋಜನೆ : ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 15:55 IST
Last Updated 14 ಜನವರಿ 2023, 15:55 IST
   

ಬೆಂಗಳೂರು/ದಾವಣಗೆರೆ: ಮನೆ ನಿರ್ವಹಣೆಗಾಗಿ ರಾಜ್ಯದ ಎಲ್ಲ ಕುಟುಂಬಗಳ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಸ್ತ್ರೀ ಸಾಮರ್ಥ್ಯ ಮತ್ತು ಸ್ತ್ರೀ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಯೋಜನೆ ರೂಪಿಸುತ್ತಿದೆ. ಮನೆ ನಿರ್ವಹಣೆ, ಕೋವಿಡ್‌ ಉಪಚಾರ, ಆರೋಗ್ಯ ಮುಂತಾದವುಗಳಿಗೆ ಸಹಾಯವಾಗುವಂತೆ ಪ್ರತಿ ಕುಟುಂಬಕ್ಕೆ ಅವರ ವೆಚ್ಚಕ್ಕೆ ಅನುಗುಣವಾಗಿ ₹ 1,000ದಿಂದ ₹ 2,000ದವರೆಗೂ ನೆರವು ನೀಡುವ ಯೋಚನೆ ಇದೆ’ ಎಂದರು.

ರೈತರು, ಕಾರ್ಮಿಕರು, ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಜನರು ಸೇರಿದಂತೆ ದುಡಿಯುವ ವರ್ಗಕ್ಕೆ ಅನುಕೂಲವಾಗುವಂತೆ ಬಜೆಟ್‌ನಲ್ಲಿ ಯೋಜನೆಗಳನ್ನು ಘೋಷಿಸಲಾಗುವುದು. ಪ್ರತಿ ಗ್ರಾಮದಲ್ಲಿ ಎರಡು ಸ್ತ್ರೀ ಶಕ್ತಿ ಸಂಘಗಳಿಗೆ ತಲಾ ₹ 5 ಲಕ್ಷದವರೆಗೂ ಸಹಾಯಧನ ನೀಡುವ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಫೆಬ್ರುವರಿ ಅಂತ್ಯದೊಳಗೆ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.

ADVERTISEMENT

ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿರು 5–6 ಜಿಲ್ಲೆಗಳ ಜನರಿಗೆ ಪೌಷ್ಟಿಕ ಆಹಾರ ಒದಗಿಸಲು ವಿಶೇಷ ಯೋಜನೆ ರೂಪಿಸಲಾಗುವುದು ಎಂದರು.

‘ಫೆ. 17ಕ್ಕೆ ಬಜೆಟ್‌ ಸಾಧ್ಯತೆ’

‘ಫೆಬ್ರುವರಿ 17ಕ್ಕೆ ಪ್ರಸಕ್ತ ಸಾಲಿನ ಬಜೆಟ್‌ ಮಂಡನೆಯಾಗುವ ಸಾಧ್ಯತೆ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಬಜೆಟ್‌ ತಯಾರಿ ಆರಂಭವಾಗಿದೆ. ವಿಧಾನಮಂಡಲದ ಜಂಟಿ ಅಧಿವೇಶನದ ದಿನಾಂಕವನ್ನು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು. ರಾಜ್ಯ ಸರ್ಕಾರದ ಆದಾಯವು ಮೂರು ಪಟ್ಟು ಹೆಚ್ಚಾಗಿದೆ. ಅದನ್ನು ಇನ್ನಷ್ಟು ಹೆಚ್ಚಿಸಲು ಗುರಿ ನಿಗದಿಪಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.