ADVERTISEMENT

ಜನಪ್ರತಿನಿಧಿಗಳ ಪ್ರಕರಣ ವಿಶೇಷ ನ್ಯಾಯಾಲಯಕ್ಕೆ: ಹೈಕೋರ್ಟ್‌

ಹೈಕೋರ್ಟ್‌ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 17:42 IST
Last Updated 6 ನವೆಂಬರ್ 2020, 17:42 IST
 ಹೈಕೋರ್ಟ್‌
ಹೈಕೋರ್ಟ್‌    

ಬೆಂಗಳೂರು: ರಾಜ್ಯದಾದ್ಯಂತ ಎಲ್ಲ ವಿಚಾರಣಾ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ತಾವು ದೂರುದಾರರಾಗಿದ್ದ ಪ್ರಕರಣವೊಂದನ್ನು ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶಾಸಕ ಎಸ್‌.ಎ. ರಾಮದಾಸ್‌ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್‌, ‘ಚುನಾಯಿತ ಪ್ರತಿನಿಧಿಗಳ ವಿರುದ್ಧ ಸಲ್ಲಿಕೆಯಾಗಿರುವ ಅಥವಾ ಚುನಾಯಿತ ಪ್ರತಿನಿಧಿಗಳು ದೂರು ಸಲ್ಲಿಸಿರುವ ಎಲ್ಲ
ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕಿದೆ’ ಎಂದು ಹೇಳಿದೆ.

ಶಾಸಕರು ಮತ್ತು ಸಂಸದರ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿಚಾರಣೆಗಾಗಿ ಮಾತ್ರ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಶಾಸಕರು ಅಥವಾ ಸಂಸದರು ದೂರುದಾರರಾಗಿರುವ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಸುಪ್ರೀಂಕೋರ್ಟ್‌ ಹೇಳಿರಲಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ADVERTISEMENT

ಆದರೆ, ಅರ್ಜಿದಾರರ ವಾದವನ್ನು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿರೋಧಿಸಿದ್ದರು.

‘ಒಳಗೊಂಡಿರುವ’ ಎಂಬ ಪದ ಸುಪ್ರೀಂಕೋರ್ಟ್‌ ಆದೇಶ ದಲ್ಲಿದೆ. ಅದು ಕೇವಲ ಚುನಾಯಿತ ಪ್ರತಿನಿಧಿಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳಿಗೆ ಸೀಮಿತವಲ್ಲ. ಅವರು ನೀಡಿರುವ ದೂರುಗಳಿಗೆ ಸಂಬಂಧಿಸಿದ ಪ್ರಕರಣಗಳೂ ಸೇರುತ್ತವೆ ಎಂದು ಪ್ರತಿವಾದ ಮಂಡಿಸಿದ್ದರು.

‘ಚುನಾಯಿತ ಪ್ರತಿನಿಧಿಗಳು ತಮಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ಮೇಲೆ ಪ್ರಭಾವ ಬೀರಬಹುದು ಎಂಬುದನ್ನು
ಗಮನದಲ್ಲಿ ಇರಿಸಿಕೊಂಡು ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿತ್ತು. ಹಾಗಿದ್ದಲ್ಲಿ, ಶಾಸಕರು ಅಥವಾ ಸಂಸದರು ತಾವೇ ದೂರುದಾರರಾಗಿರುವ ಪ್ರಕರಣಗಳ ತನಿಖೆ ಮತ್ತು ವಿಚಾರಣೆಯ ಮೇಲೂ ಪ್ರಭಾವ ಬೀರುವುದನ್ನು ಅಲ್ಲಗಳೆಯಲಾಗದು’ ಎಂದು ನ್ಯಾ. ಕುನ್ಹ ಹೇಳಿದ್ದಾರೆ.

ದೂರು ಮತ್ತು ಪ್ರತಿ ದೂರುಗಳು ದಾಖಲಾದ ಸಂದರ್ಭದಲ್ಲಿ ವಿಚಾರಣೆ ಕ್ಲಿಷ್ಟಕರವಾಗಿರುತ್ತದೆ.

ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ 2018ರ ಫೆಬ್ರುವರಿ 2ರಂದು ಹೊರಡಿಸಿರುವ ಆದೇಶ, ಸುಪ್ರೀಂಕೋರ್ಟ್‌ ಆದೇಶದ ವ್ಯಾಪ್ತಿ ಯಲ್ಲೇ ಇದೆ ಎಂದು ನ್ಯಾಯಾಲಯ ಹೇಳಿದೆ.

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಎಸ್‌.ಎ. ರಾಮದಾಸ್‌ ಸಲ್ಲಿಸಿದ್ದ ದೂರನ್ನು ಆಧರಿಸಿ ಪೊಲೀ ಸರು, ಆರೋಪಿಗಳ ವಿರುದ್ಧ ಅತಿಕ್ರಮ ಪ್ರವೇಶ ಮತ್ತು ಸುಲಿಗೆ ಆರೋಪದಡಿ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣವನ್ನು ವಿಚಾರಣಾ ನ್ಯಾಯಾಲಯ 2018ರ ಜೂನ್‌ 17ರಂದು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿರುವುದನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.