ಬೆಂಗಳೂರು: ರಾಜ್ಯದಲ್ಲಿ ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಪಡೆ ರಚಿಸಿ ಒಳಾಡಳಿತ ಇಲಾಖೆ ಆದೇಶ ಹೊರಡಿಸಿದೆ.
ಬೆಂಗಳೂರು ಸೇರಿದಂತೆ ನಗರಗಳ ವ್ಯಾಪ್ತಿಯಲ್ಲಿ ನಗರ ಪೊಲೀಸ್ ಆಯುಕ್ತರು, ಆಯಾ ಜಿಲ್ಲೆಗಳಲ್ಲಿ ಎಸ್‌ಪಿಗಳು ಕಾರ್ಯಪಡೆಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹೆಚ್ಚುವರಿ ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಬಾಲನ್ಯಾಯ ಮಂಡಳಿ ಸದಸ್ಯರು, ಮಕ್ಕಳ ವಿಶೇಷ ಪೊಲೀಸ್ ಘಟಕದ ಮುಖ್ಯಸ್ಥರು, ಮಾನವ ಕಳ್ಳ ಸಾಗಣೆ ವಿರೋಧಿ ಘಟಕದ ಸದಸ್ಯರು, ಇಬ್ಬರು ಅರೆ ನ್ಯಾಯಿಕ ಸ್ವಯಂ ಸೇವಕರು, ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಕಾರ್ಯಕರ್ತರು ಸದಸ್ಯರಾಗಿರುತ್ತಾರೆ. ಆಯಾ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುವರು.
ರಾಜ್ಯದ ಹಲವೆಡೆ ಮಕ್ಕಳು ಕಾಣೆಯಾದ ಪ್ರಕರಣಗಳು ದಾಖಲಾಗಿದ್ದು, ಹಲವು ಪ್ರಕರಣಗಳಲ್ಲಿ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಭೆಯಲ್ಲೂ ಚರ್ಚಿಸಲಾಗಿದೆ. ವಿಶೇಷ ಕಾರ್ಯಪಡೆ ಪ್ರತಿ ತಿಂಗಳು ಸಭೆ ನಡೆಸಬೇಕು. ಕಾಣೆಯಾದ, ಪತ್ತೆಯಾಗದ ಮಕ್ಕಳ ಪಟ್ಟಿ ಸಿದ್ಧಪಡಿಸಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರಕ್ಕೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.