ADVERTISEMENT

ನೀರಾವರಿ ಯೋಜನೆಗಳಿಗೆ ಎರಡೂವರೆ ವರ್ಷದಲ್ಲಿ ₹47,343 ಕೋಟಿ ಖರ್ಚು: ಸಚಿವ

ವಿಧಾನಸಭೆಯಲ್ಲಿ ಸಚಿವ ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 19:26 IST
Last Updated 28 ಮಾರ್ಚ್ 2022, 19:26 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಂಗಳೂರು: ಕಳೆದ ಎರಡೂವರೆ ವರ್ಷಗಳಲ್ಲಿ ವಿವಿಧ ನೀರಾವರಿ ಯೋಜನೆಗಳಿಗೆ ಒಟ್ಟು ₹47,343 ಕೋಟಿ ಖರ್ಚು ಮಾಡಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ವಿಧಾನಸಭೆಯಲ್ಲಿ ಸೋಮವಾರ ಇಲಾಖೆ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಕೋವಿಡ್‌ ಮತ್ತು ಆರ್ಥಿಕ ಸಂಕಷ್ಟದ ಮಧ್ಯೆಯೂ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಿದ್ದೇವೆ ಎಂದರು.

2018 ರ ಬಳಿಕ ಸುಮಾರು ನಾಲ್ಕು ಸಾವಿರ ಸಣ್ಣ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿ ಮಾಡಿದ್ದೇವೆ. ₹50 ಲಕ್ಷದಿಂದ ₹1 ಕೋಟಿವರೆಗಿನ ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರು ಸಂಕಷ್ಟದಲ್ಲಿದ್ದರು. ಮಂಡ್ಯದಿಂದ ಸಣ್ಣ ಗುತ್ತಿಗೆದಾರರೊಬ್ಬರು ತಮ್ಮ ಮಗಳ ಮದುವೆಯ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು. ತಮ್ಮ ಬಾಕಿ ಇರುವ ₹20 ಲಕ್ಷ ಬಿಲ್‌ ಪಾವತಿ ಮಾಡಿದರೆ ಮಾತ್ರ ಮಗಳ ಮದುವೆ ಮಾಡಲು ಸಾಧ್ಯ ಎಂದರು. ಇದರಿಂದ ನನ್ನ ಮನಸ್ಸು ಕಲಕಿತು. ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಇದ್ದರೂ ಸಣ್ಣ ಗುತ್ತಿಗೆದಾರರ ಬಿಲ್‌ ಪಾವತಿ ಮಾಡಲು ನಿರ್ಧರಿಸಲಾಯಿತು ಎಂದು ವಿವರಿಸಿದರು.

ADVERTISEMENT

ಯುಕೆಪಿ3 ರಾಷ್ಟ್ರೀಯ ಯೋಜನೆ ಸಾಧ್ಯವಿಲ್ಲ: ಕೃಷ್ಣಾ ಮೇಲ್ದಂಡೆ 3 ನೇ ಹಂತದ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರಜೋಳ, ‘ಈ ಯೋಜನೆ ಬಗ್ಗೆ ಮಹಾರಾಷ್ಟ್ರದ ತಕರಾರು ಇಲ್ಲದಿದ್ದರೂ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿವೆ. ನ್ಯಾಯಾಲಯದಲ್ಲಿ ಅಂತರ್‌ ರಾಜ್ಯ ವ್ಯಾಜ್ಯ ಇದ್ದರೆ ಅಂತಹ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಯ ವ್ಯಾಪ್ತಿಗೆ ಒಳಪಡಿಸಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.

ಒಂದು ಶತಮಾನ ಬೇಕೇ?: ಕರ್ನಾಟಕದ ನೀರಾವರಿ ಯೋಜನೆಗಳ ಪೈಕಿ ಶೇ 72 ರಷ್ಟು ಭಾಗ ಕೃಷ್ಣಾ ಕಣಿವೆ ಯೋಜನೆಗಳೇ ಆಗಿವೆ. ಇವುಗಳನ್ನು ಪೂರ್ಣಗೊಳಿಸಲು ಸುಮಾರು ₹ 1ಲಕ್ಷ ಕೋಟಿಯಾದರೂ ಬೇಕಾಗಬಹುದು. ಈಗ ಸರ್ಕಾರ ಬಿಡುಗಡೆ ಮಾಡುವ ಮೊತ್ತ ನೋಡಿದರೆ ಒಂದು ಶತಮಾನ ಆದರೂ ಯೋಜನೆಗಳನ್ನು ಪೂರ್ಣಗೊಳಿಸುವುದು ಸಾಧ್ಯವಿಲ್ಲ. ಇವುಗಳನ್ನು ಬೇಗನೇ ಪೂರ್ಣಗೊಳಿಸಲು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.

ಕೃಷ್ಣಾ– ಕಾವೇರಿ ಜಟಾಪಟಿ

ಜಲಸಂಪನ್ಮೂಲ ಸಚಿವರ ಉತ್ತರದ ವೇಳೆ ಉತ್ತರ ಕರ್ನಾಟಕ ಭಾಗದ ಶಾಸಕರೇ ಹೆಚ್ಚಿನ ಉಪಪ್ರಶ್ನೆಗಳನ್ನು ಕೇಳುತ್ತಿದ್ದರು. ಇದರಿಂದ ರೇಗಿದ ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ, ‘ನೀರಾವರಿ ಯೋಜನೆ ಎಂದರೆ ಕೃಷ್ಣಾ ಮೇಲ್ದಂಡೆ ಯೋಜನೆ ಮಾತ್ರನಾ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಕರ್ನಾಟಕ ಭಾಗದ ಬಿಜೆಪಿ ಮತ್ತು ಕಾಂಗ್ರೆಸ್‌ನ ಆಕ್ಷೇಪ ವ್ಯಕ್ತಪಡಿಸಿದರು. ಇದು ಪರಸ್ಪರ ವಾಗ್ವಾದಕ್ಕೂ ಕಾರಣವಾಯಿತು.

ಶಿವಲಿಂಗೇಗೌಡರಿಗೆ ತಿರುಗೇಟು ನೀಡಿದ ಶಿವಾನಂದ ಪಾಟೀಲ ಅವರು, ‘ಗೌಡರೇ, ಮೈಸೂರು ಮಹಾರಾಜರು ಕನ್ನಂಬಾಡಿ ಕಟ್ಟಿ ಹೋಗಿದ್ದಕ್ಕೆ ನೀವು ಬದುಕಿದ್ದೀರಿ. ನಮ್ಮ ಭಾಗದಲ್ಲಿ ಆ ರೀತಿ ಯಾರೂ ಕಟ್ಟಿಲ್ಲ’ ಎಂದರು. ಆಗ ಮಧ್ಯ ಪ್ರವೇಶಿಸಿದ ಸಚಿವ ಕಾರಜೋಳ, ‘ನಮ್ಮ ಸರ್ಕಾರ ಎಲ್ಲಾ ಭಾಗವನ್ನು ಸಮಾನವಾಗಿ ನೋಡುತ್ತದೆ’ ಎಂದು ಹೇಳಿ ಶಾಸಕರನ್ನು ಸಮಾಧಾನ
ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.