ADVERTISEMENT

ಶ್ರೀಗಳ ಕ್ಷೌರ ಮಾಡಿದ್ದೆ, ಬಟ್ಟೆ ಒಗೆದಿದ್ದೆ: ಗುರುಬಸವ ಸ್ವಾಮೀಜಿ

ಪ್ರಕಾಶ ಕುಗ್ವೆ
Published 22 ಜನವರಿ 2019, 1:35 IST
Last Updated 22 ಜನವರಿ 2019, 1:35 IST
ಗುರುಬಸವ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತಮಠ
ಗುರುಬಸವ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತಮಠ   

ದಾವಣಗೆರೆ: ‘ಸಿದ್ಧಗಂಗಾ ಶ್ರೀಗಳ ಕ್ಷೌರ ಮಾಡಿದ್ದೆ, ಅವರ ಬಟ್ಟೆ ತೊಳೆದಿದ್ದೆ. ಸ್ನಾನಕ್ಕೂ ನೆರವಾಗುತ್ತಿದ್ದೆ. ಅವರ ಪ್ರತಿನಿತ್ಯದ ಶಿವಪೂಜೆಗೆ ಸಿದ್ಧತೆ ಮಾಡಿಕೊಡುತ್ತಿದ್ದೆ’ ಎಂದು ಚನ್ನಗಿರಿ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಸ್ಮರಿಸಿಕೊಂಡರು.

‘1983ರಿಂದ 1996ರವರೆಗೆ ಸಿದ್ಧಗಂಗಾ ಮಠದಲ್ಲೇ ನನ್ನ ವಿದ್ಯಾಭ್ಯಾಸ ನಡೆಯಿತು. 14 ವರ್ಷಗಳ ಕಾಲ ಅವರ ಜತೆಗೇ ಇದ್ದು, ಅವರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ‘ ಎಂದು ಪ್ರತಿಕ್ರಿಯಿಸಿದರು.

‘ಸ್ವಾಮೀಜಿಗಳಿಗೆ ಹಲವು ವರ್ಷಗಳ ಕಾಲ ನಾನೇ ಕ್ಷೌರ (ಭದ್ರಕರಣ) ಮಾಡುತ್ತಿದ್ದೆ. ಮಠಾಧಿಪತಿಗಳ ಇತಿಹಾಸದಲ್ಲಿ ಕ್ಷೌರ ಮಾಡಿದ್ದು ಯಾರಾದರೂ ಇದ್ದರೆ ಅದು ನಾನೇ ಅನ್ನಿಸುತ್ತದೆ. ಇದೊಂದು ಹೆಗ್ಗಳಿಕೆ ನನಗೆ. ಸ್ವಾಮೀಜಿಗೆ ಕೆಲ ವರ್ಷ ಬೆಂಗಾವಲು ಆಗುವ ಅವಕಾಶವೂ ನನ್ನ ಪಾಲಿಗೆ ಒದಗಿಬಂದಿತ್ತು. ಅದು ಗೌರಿಶಂಕರ ಸ್ವಾಮೀಜಿ ಮಠ ಬಿಟ್ಟು ಹೋಗುವ ಸಂದರ್ಭ. ಅವಾಗ, ಸಿದ್ಧಗಂಗಾ ಶ್ರೀಗಳ ಪೂರ್ಣಪ್ರಮಾಣದ ಬೆಂಗಾವಲು ನಾನೇ ಆಗಿದ್ದೆ’ ಎಂದು ಗುರುಬಸವ ಸ್ವಾಮೀಜಿ ನೆನಪಿಸಿಕೊಂಡರು.

ADVERTISEMENT

‘ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಮಠದ ಶಾಲಾ–ಕಾಲೇಜುಗಳಲ್ಲೇ ಮುಗಿಸಿದೆ. ಸಂಸ್ಕೃತದಲ್ಲಿ ವಿದ್ವತ್‌ ಅನ್ನು ಪ್ರಥಮ ರ‍್ಯಾಂಕ್‌ನೊಂದಿಗೆ ಪಡೆದಿದ್ದೆ. ಸ್ವಾಮೀಜಿ ಅಂದು ಬಹಳ ಸಂತೋಷ ವ್ಯಕ್ತಪಡಿಸಿದ್ದರು. ಸ್ವಾಮೀಜಿ ಕೇವಲ ನನಗೆ ಧಾರ್ಮಿಕ ಗುರುಗಳಷ್ಟೇ ಆಗಿರಲಿಲ್ಲ. ವಿದ್ಯಾ ಗುರುಗಳೂ ಆಗಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ನನಗೆ ಇಂಗ್ಲಿಷ್‌ ಹೇಳಿಕೊಟ್ಟಿದ್ದರು. ಅವರಿಂದ ಜ್ಞಾನ ದಾಸೋಹ ಎಂದರೇನು? ಲಿಂಗ ಪೂಜೆ ಮಹತ್ವವೇನು? ಎಂಬುದನ್ನೂ ಕಲಿತುಕೊಂಡೆ’ ಎಂದರು.

‘ಶ್ರೀ ಗಳದ್ದು ಶಿಸ್ತಿನ ಜೀವನ. ಪ್ರತಿನಿತ್ಯ ಮೂರು ಗಂಟೆಗೆ ಎದ್ದು ಬಿಡೋರು. ಧ್ಯಾನ, ಯೋಗ, ಲಿಂಗಪೂಜೆ ಮುಗಿಸಿ ಹೊರಗೆ ಬರುವ ಹೊತ್ತಿಗೆ 5 ಗಂಟೆ ಆಗುತ್ತಿತ್ತು. ಪ್ರತಿನಿತ್ಯ ಬೆಳಿಗ್ಗೆ ಇಡ್ಲಿ–ಚಟ್ನಿ ಬಿಟ್ಟರೆ ಯಾವ ತಿಂಡಿಯನ್ನೂ ತಿನ್ನುತ್ತಿರಲಿಲ್ಲ. ಬೇವಿನ ಕಷಾಯ ಒಂದು ಲೋಟ ಕುಡಿಯುತ್ತಿದ್ದರು. ಮಧ್ಯಾಹ್ನ ರಾಗಿಮುದ್ದೆ. ಅನ್ನ ಚಮಚದಷ್ಟು ಮಾತ್ರ. ಆದರೆ, ಮೂರು ಹೊತ್ತು ಹಣ್ಣುಗಳನ್ನು ಸ್ವೀಕರಿಸುತ್ತಿದ್ದರು. ರಾತ್ರಿ 11 ಗಂಟೆಗೆ ಮಲಗುತ್ತಿದ್ದರು. ಪ್ರತಿನಿತ್ಯ ಜನರ ಭೇಟಿ ಕಾರ್ಯ ಇರುತ್ತಿತ್ತು. ಬೇರೆ, ಬೇರೆ ಊರುಗಳಿಗೆ ಕಾರ್ಯಕ್ರಮಗಳಿಗೆ, ಪೂಜೆಗೆ ಹೋಗುತ್ತಿದ್ದರು. ಅವಾಗ ನಾನೂ ಜತೆಗೆ ತೆರಳುತ್ತಿದ್ದೆ. ಇದೆಲ್ಲವೂ ಅವಿಸ್ಮರಣೀಯ’ ಎಂದು ಸಿದ್ಧಗಂಗಾ ಶ್ರೀಗಳ ದಿನಚರಿ ವಿವರಿಸಿದರು.

ಒಂದೇ ನಾಟಕ, ಸಾವಿರ ಸಲ ವೀಕ್ಷಣೆ:

ಗ್ರಾಮಾಂತರ ಪ್ರದೇಶಗಳಲ್ಲಿ ಅವಾಗ ಮಠದಿಂದ ‘ಬಸವ ಜಯಂತಿ’ ಆಚರಿಸಲಾಗುತ್ತಿತ್ತು. ‘ಶ್ರೀಜಗಜ್ಯೋತಿ ಬಸವೇಶ್ವರ’ ನಾಟಕ ಆಡಿಸಲಾಗುತ್ತಿತ್ತು. ಅದು ರಾತ್ರಿ 9ಗಂಟೆಗೆ ಆರಂಭವಾದರೆ ಬೆಳಿಗ್ಗೆ 5.30 ರವರೆಗೆ ನಡೆಯುತ್ತಿತ್ತು. ಸ್ವಾಮೀಜಿ ಕ್ಷಣವೂ ಕಣ್ಣುಮಿಟುಕಿಸದೆ ಆ ನಾಟಕ ವೀಕ್ಷಿಸುತ್ತಿದ್ದರು. ಇದು ಒಂದು ಸಲ ಅಲ್ಲ. ಬರೋಬ್ಬರಿ ಒಂದು ಸಾವಿರ ಬಾರಿ ಈ ಒಂದೇ ನಾಟಕವನ್ನು ಅವರು ವೀಕ್ಷಿಸಿದ್ದಾರೆ. ಅವರೊಂದಿಗೆ ನನಗೂ ಆ ನಾಟಕ ವೀಕ್ಷಿಸುವ ಭಾಗ್ಯ ಒದಗಿಬಂದಿತ್ತು’ ಎಂದು ಗುರುಬಸವ ಸ್ವಾಮೀಜಿ ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.