ADVERTISEMENT

ಪೌರತ್ವ (ತಿದ್ದುಪಡಿ) ಕಾಯ್ದೆ ವಾಪಸ್‌ಗೆ ಎಸ್‌.ಆರ್‌. ಹಿರೇಮಠ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 14:30 IST
Last Updated 14 ಡಿಸೆಂಬರ್ 2019, 14:30 IST
ಎಸ್‌.ಆರ್‌. ಹಿರೇಮಠ
ಎಸ್‌.ಆರ್‌. ಹಿರೇಮಠ   

ಹುಬ್ಬಳ್ಳಿ: ಪೌರತ್ವ (ತಿದ್ದುಪಡಿ) ಕಾಯ್ದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು, ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್‌ ಕಾ ಸಾಥ್‌;ಸಬ್‌ ಕಾ ವಿಕಾಸ್‌’ ಘೋಷಣೆಗೆ ಪೌರತ್ವ (ತಿದ್ದುಪಡಿ) ಕಾಯ್ದೆಯು ತದ್ವಿರುದ್ಧವಾಗಿದೆ. ಮುಸ್ಲಿಮರನ್ನು ದೇಶದ ದ್ವಿತೀಯ ದರ್ಜೆ ನಾಗರಿಕರನ್ನಾಗಿ ಮೂಲೆಗೆ ತಳ್ಳುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್‌ ಹಾಗೂ ಶತಮಾನಗಳಿಂದ ಭಾರತ ಅನುಸರಿಸಿಕೊಂಡು ಬರುತ್ತಿರುವ ಮೌಲ್ಯಗಳಿಗೆ ಈ ಕಾಯ್ದೆ ವಿರೋಧವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಈ ಕಾಯ್ದೆ ವಿರೋಧಿಸಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ, ವಿರೋಧ ವ್ಯಕ್ತವಾಗುತ್ತಿದ್ದು, ದೇಶಾದ್ಯಂತ ಈ ಕಾಯ್ದೆ ವಿರೋಧಿಸಿ ಜನಾಂದೋಲನ ನಡೆಯುವ ಅಗತ್ಯವಿದೆ ಎಂದರು.

ADVERTISEMENT

ಮಹಮ್ಮದ್‌ ಆಲಿ ಜಿನ್ನಾ ಮತ್ತು ವೀರ ಸಾವರ್ಕರ್‌ ಅವರ ಸಿದ್ಧಾಂತಗಳ ಹಾದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಸಾಗುತ್ತಿದ್ದಾರೆ. ದೇಶದ ಅಭಿವೃದ್ಧಿ ನೀತಿ ಕೈಬಿಟ್ಟಿದ್ದಾರೆ. ಮಾಡಬಾರದ ದುರಾಡಳಿತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನೇಮಕಕ್ಕೆ ಆಕ್ಷೇಪ:ನಿಯಮಗಳನ್ನು ಗಾಳಿಗೆ ತೂರಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡಿದ್ದು, ಈ ಬಗ್ಗೆ ಹೈಕೋರ್ಟ್‌ನಲ್ಲಿ ಸಮಾಜ ಪರಿವರ್ತನಾ ಸಮುದಾಯದಿಂದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದು, ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಂಡಿದೆ ಎಂದು ಹೇಳಿದರು.

ಉಪ ಲೋಕಾಯುಕ್ತ ನೇಮಕವನ್ನು ರದ್ದುಗೊಳಿಸುವಂತೆ ಸಲ್ಲಿಸಿರುವ ರಿಟ್‌ ಪಿಟಿಷನ್‌ ಮಾನ್ಯ ಮಾಡಿರುವ ಹೈಕೋರ್ಟ್‌, ಈ ಸಂಬಂಧ ಸರ್ಕಾರಕ್ಕೆ ನೋಟಿಸ್‌ ನೀಡಿರುವುದನ್ನು ಸ್ವಾಗತಿಸುವುದಾಗಿ ತಿಳಿಸಿದರು.

ಶರಣ–ಸಂತರ ಸಂದೇಶ ಯಾತ್ರೆ:ನಾಡಿನ ಶರಣರು, ಸೂಫಿ ಸಂತರು ಮತ್ತು ದಾಸರು ಸಾರಿದ ಮೌಲ್ಯಗಳನ್ನು ಎತ್ತಿ ಹಿಡಿಯಲು ಹಾಗೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಸರ್ವಜ್ಞನ ಹುಟ್ಟೂರಾದ ಹಾವೇರಿ ಜಿಲ್ಲೆಯ ಅಬಲೂರಿನಿಂದ ಆರಂಭಗೊಂಡು ಕನಕದಾಸರ ಕಾಗಿನೆಲೆ, ಷರೀಫರ ಶಿಶುವಿನಾಳ, ಕಪ್ಪತಗುಡ್ಡ ಮೂಲಕ ಕೂಡಲಸಂಗಮದ ವರೆಗೆ ಜನವರಿಯಲ್ಲಿ ಪ್ರಥಮ ಹಂತದ ಶರಣ–ಸಂತರ ಸಂದೇಶ ಯಾತ್ರೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

2020 ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಬವಸಣ್ಣನ ಕರ್ಮಭೂಮಿ ಬಸವಕಲ್ಯಾಣದಿಂದ ಸಂತ ತುಕಾರಾಮನ ನೆಲೆಯಾದ ಮಹಾರಾಷ್ಟ್ರದ ಪುಣೆ ಸಮೀಪದ ದೇಹು ವರೆಗೆ ಎರಡನೇ ಹಂತದ ಶರಣ–ಸಂತರ ಸಂದೇಶ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.