ಬೆಂಗಳೂರು: ‘ಬಿಜೆಪಿ ನಾಯಕ ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಕರೆತಂದರೆ ನನ್ನನ್ನು ತುಳಿದಂತೆ ಆಗುವುದಿಲ್ಲ. ಅದೆಲ್ಲ ಊಹಾಪೋಹ. ಶ್ರೀರಾಮುಲು ಅವರ ರಾಜಕೀಯ ಕಾರ್ಯಕ್ಷೇತ್ರ ಬಳ್ಳಾರಿ. ನನ್ನದು ಬೆಳಗಾವಿ. ಹೀಗಾಗಿ ನಮಗೂ ಅವರಿಗೂ ಏನು ಸಂಬಂಧ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರಶ್ನಿಸಿದರು.
‘ಸತೀಶ ಜಾರಕಿಹೊಳಿ ಅವರನ್ನು ಮಣಿಸಲು ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ’ ಎಂಬ ಜನಾರ್ದನ ರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಅವರನ್ನು ಪಕ್ಷಕ್ಕೆ ಯಾರು ಕರೆ ತರುತ್ತಿದ್ದಾರೊ ಅವರನ್ನೇ ಈ ಬಗ್ಗೆ ಕೇಳಬೇಕು. ಅಷ್ಟಕ್ಕೂ ಶ್ರೀರಾಮುಲು ಅವರೇ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದು ಹೇಳಿದ್ದಾರೆ’ ಎಂದರು.
‘ಶ್ರೀರಾಮುಲು ಅವರನ್ನು ಕಾಂಗ್ರೆಸ್ ಸೇರ್ಪಡೆ ಮಾಡಲು ಪ್ರಯತ್ನ ನಡೆದಿದೆ’ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಚುನಾವಣೆಗೂ ಮೊದಲು ಈ ಪ್ರಯತ್ನ ಆಗಿರಬಹುದು. ಆದರೆ, ಈಗ ಅಂತಹ ಪ್ರಯತ್ನ ಇಲ್ಲ. ಅವರು ಕಾಂಗ್ರೆಸ್‌ಗೆ ಬರುವುದಾದರೆ ಸ್ವಾಗತಿಸುತ್ತೇನೆ’ ಎಂದರು.
ನೋಟಿಸ್‌ಗೆ ಮಹತ್ವ ಕೊಡಬೇಕಿಲ್ಲ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮತ್ತು ಸಚಿವ ಬೈರತಿ ಸುರೇಶ್‌ಗೆ ನೋಟಿಸ್ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ, ‘ಇ.ಡಿಯಲ್ಲಿ ಈ ಬಗ್ಗೆ ತನಿಖೆ ನಡೆಯುತ್ತಿದೆ. ನೋಟಿಸ್ ಹೊಸತಲ್ಲ’ ಎಂದರು.
‘ಈ ಪ್ರಕರಣ ರಾಜಕೀಯವಾಗಿಯೂ ಇದೆ. ಹಾಗೆಂದು, ಎಲ್ಲ ಸಂದರ್ಭಗಳಲ್ಲಿಯೂ ರಾಜಕೀಯ ಎಂದು ಹೇಳಲು ಆಗುವುದಿಲ್ಲ. ನೋಟಿಸ್‌ಗೆ ಉತ್ತರ ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.