ADVERTISEMENT

‘ಸೋಂಕು ದೃಢಪಟ್ಟರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ’

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 19:55 IST
Last Updated 28 ಜೂನ್ 2020, 19:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗೆ ಕೋವಿಡ್–19 ದೃಢಪಟ್ಟರೆ, ಜೊತೆಯಲ್ಲಿ ಪರೀಕ್ಷೆ ಬರೆದಿದ್ದ ಇತರವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಮುಂದಿನ ಪರೀಕ್ಷೆಗಳನ್ನು ಬರೆಯಲು ವ್ಯವಸ್ಥೆ ಮಾಡಲಾಗುವುದು’ ಎಂದು ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ಜಿ. ಜಗದೀಶ್‌ ತಿಳಿಸಿದ್ದಾರೆ.

‘ಪ್ರತಿ ಡೆಸ್ಕ್‌ನಲ್ಲಿ ಒಬ್ಬ ವಿದ್ಯಾರ್ಥಿ ಹಾಗೂ ಡೆಸ್ಕ್‌ಗಳ ಮಧ್ಯೆ ಆರು ಅಡಿ ಅಂತರವಿರುವಂತೆ ಕ್ರಮ ವಹಿಸಬೇಕು. ಅಂತಹ ಎಲ್ಲ ವಿದ್ಯಾರ್ಥಿಗಳಿಗೆ ಎನ್‌95 ಮಾಸ್ಕ್‌ ಒದಗಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು’ ಎಲ್ಲ ಜಿಲ್ಲೆಗಳ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಜೂನ್‌ 25 ಮತ್ತು 27ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಯಾವುದೇ ರೋಗ ಲಕ್ಷಣ ಇಲ್ಲದ ವಿದ್ಯಾರ್ಥಿಗೆ ಆರೋಗ್ಯ ಇಲಾಖೆ ನಡೆಸಿದ ರ‍್ಯಾಂಡಮ್‌ ತಪಾಸಣೆಯಲ್ಲಿ ಕೋವಿಡ್‌–19 ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ, ಸೋಂಕಿತ ವಿದ್ಯಾರ್ಥಿಯ ಸುತ್ತಮುತ್ತ ಕುಳಿತು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಬಾಕಿ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಬಹುದೇ ಎಂಬ ಬಗ್ಗೆ ಆರೋಗ್ಯ ಇಲಾಖೆಗೆ ಶಿಕ್ಷಣ ಇಲಾಖೆ ಪತ್ರ ಬರೆದು ಸ್ಪಷ್ಟೀಕರಣ ಕೇಳಿತ್ತು. ಇಲಾಖೆ ನೀಡಿರುವ ಸ್ಪಷ್ಟನೆಯ ಅನ್ವಯ ಈ ಸುತ್ತೋಲೆ ಹೊರಡಿಸಲಾಗಿದೆ.

ADVERTISEMENT

ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ‘ಯಾವುದೇ ವಿದ್ಯಾರ್ಥಿ ವಿಚಲಿತಗೊಳ್ಳಬಾರದು. ಓದಿನ ಕಡೆಗೆ ಮನಸ್ಸು ಕೇಂದ್ರೀಕರಿಸಿ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಹಾಸನದಲ್ಲಿ ಕೋವಿಡ್ ಸೋಂಕಿತ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾದ ಕೊಠಡಿಯನ್ನು ಮುಚ್ಚಲಾಗಿದ್ದು, ಸೋಂಕಿತ ವಿದ್ಯಾರ್ಥಿಗೆ ಚಿಕಿತ್ಸೆ ಮುಂದುವರೆದಿದೆ. ಈ ಕೇಂದ್ರದಲ್ಲಿ ಸೋಂಕಿತ ವಿದ್ಯಾರ್ಥಿಯನ್ನು ಹೊರತುಪಡಿಸಿ ಪರೀಕ್ಷೆ ಬರೆದಿದ್ದ ಇತರ ಎಲ್ಲ ವಿದ್ಯಾರ್ಥಿಗಳು ಸೋಮವಾರದಿಂದ ಎಂದಿನಂತೆ ಪರೀಕ್ಷೆ ಬರೆಯಲಿದ್ದಾರೆ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.