ADVERTISEMENT

ನಕಲಿ ಪ್ರಶ್ನೆಪತ್ರಿಕೆ ಹರಿಬಿಟ್ಟವನ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 13:29 IST
Last Updated 27 ಜೂನ್ 2020, 13:29 IST

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯದ್ದು ಎಂದು ಹೇಳಿ ನಕಲಿ ಇಂಗ್ಲಿಷ್ ಪ್ರಶ್ನೆಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದವನ ವಿರುದ್ಧ ಉತ್ತರ ವಿಭಾಗದ ಸೈಬರ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ನಕಲಿ ಪ್ರಶ್ನೆಪತ್ರಿಕೆ ಸಂಬಂಧ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಎಚ್‌.ವಿ.ಕೆಂಪರಾಜು ದೂರು ನೀಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜೂನ್ 25ರಿಂದ ಜುಲೈ 4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ ನಿಗದಿ ಆಗಿದೆ. ಇದರ ಮಧ್ಯೆಯೇ ಆರೋಪಿ, ದ್ವಿತೀಯ ಭಾಷೆ ಇಂಗ್ಲಿಷ್ ಪ್ರಶ್ನೆಪತ್ರಿಕೆ ಎಂದು ಹೇಳಿ ನಕಲಿ ಪ್ರಶ್ನೆಪತ್ರಿಕೆಯನ್ನು ಹಲೊ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ಅದು ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು ಎಂಬುದಾಗಿ ಕೆಂಪರಾಜು ತಿಳಿಸಿದ್ದಾರೆ. ಆರೋಪಿ ಪತ್ತೆಗಾಗಿ, ಆ್ಯಪ್‌ ನಿರ್ವಹಣಾ ಕಂಪನಿಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದೂ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.