ADVERTISEMENT

ಎಸ್ಸೆಸ್ಸೆಲ್ಸಿ: ಸರ್ಕಾರಿ ಶಾಲೆಗಳ ಫಲಿತಾಂಶ ಸುಧಾರಣೆ

ರಾಜ್ಯದ 593 ಸರ್ಕಾರಿ ಶಾಲೆಗಳಲ್ಲಿ ಶೇ 100 ಫಲಿತಾಂಶ, ಗ್ರಾಮೀಣ ವಿದ್ಯಾರ್ಥಿಗಳು ಮುಂದು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 20:01 IST
Last Updated 30 ಏಪ್ರಿಲ್ 2019, 20:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಎಸ್ಸೆಸ್ಸೆಲ್ಸಿಯಲ್ಲಿಶೇ 73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಬಾರಿಗಿಂತ (ಶೇ 71.93) ಶೇ 1.80 ರಷ್ಟು ಫಲಿತಾಂಶ ಹೆಚ್ಚಳವಾಗಿದೆ.

ಸರ್ಕಾರಿ ಪ್ರೌಢಶಾಲೆಗಳ ಫಲಿತಾಂಶದಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ. 593 ಸರ್ಕಾರಿ ಪ್ರೌಢಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದಿರುವುದು ಗಮನಾರ್ಹ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಫಲಿತಾಂಶದ ವಿವರಗಳನ್ನು ಬಿಡುಗಡೆ ಮಾಡಿದರು.

ADVERTISEMENT

ಬೆಂಗಳೂರು ದಕ್ಷಿಣ ಜಿಲ್ಲೆಯ ಆನೇಕಲ್‌ ತಾಲ್ಲೂಕು ಅತ್ತಿಬೆಲೆಯ ಸೇಂಟ್‌ ಫಿಲೋಮಿನಾ ಇಂಗ್ಲಿಷ್‌ ಪ್ರೌಢಶಾಲೆಯ ವಿದ್ಯಾರ್ಥಿನಿ ಸೃಜನಾ.ಡಿ ಮತ್ತು ಕುಮಟಾ ತಾಲ್ಲೂಕು ಕಲಬಾಗ್‌ನ ಕೊಲಾಬ ವಿಠೋಬ ಶಾನ್‌ಭಾಗ್‌ ಕಲಬಾಗ್‌ಕರ್‌ ಹೈಸ್ಕೂಲ್‌ನ ನಾಗಾಂಜಲಿ ಪರಮೇಶ್ವರ ನಾಯ್ಕ ತಲಾ 625 ಅಂಕಗಳನ್ನು ಪಡೆದು ಮೊದಲಿಗರಾಗಿರುವ ವಿದ್ಯಾರ್ಥಿನಿಯರು.

ಬಾಲಕಿಯರೇ ಮೇಲುಗೈ: ಈ ಬಾರಿಯೂ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದು ಬಾಲಕಿಯರು ಶೇ 79.59 ಮತ್ತು ಬಾಲಕರು ಶೇ 68.46 ರಷ್ಟು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತೀರ್ಣ ಪ್ರಮಾಣ ಹೆಚ್ಚಳವಾಗಿದೆ. 2017–18 ರಲ್ಲಿ ಬಾಲಕಿಯರು ಶೇ 78.01 ಮತ್ತು ಬಾಲಕಿಯರು ಶೇ 66.56 ರಷ್ಟು ಉತ್ತೀರ್ಣರಾಗಿದ್ದರು ಎಂದು ಉಮಾಶಂಕರ್‌ ತಿಳಿಸಿದರು.

ಸರ್ಕಾರಿ ಶಾಲೆಗಳ ಫಲಿತಾಂಶ ಸುಧಾರಣೆ: ಈ ವರ್ಷ ಸರ್ಕಾರಿ ಶಾಲೆಗಳ ಫಲಿತಾಂಶ ಸುಧಾರಣೆಯಾಗಿದ್ದು, ಶೇ 77.84 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಯಾವುದೇ ಸರ್ಕಾರಿ ಶಾಲೆ ಶೂನ್ಯ ಫಲಿತಾಂಶ ಪಡೆದಿಲ್ಲ. 593 ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದಿವೆ. ಕಳೆದ ಸಾಲಿನಲ್ಲಿ 102 ಸರ್ಕಾರಿ ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದಿದ್ದವು.

ಅನುದಾನಿತ ಶಾಲೆಗಳು ಶೇ 77.21 ಮತ್ತು ಅನುದಾನ ರಹಿತ ಶಾಲೆಗಳು ಶೇ 82.72 ಫಲಿತಾಂಶ ಪಡೆದಿವೆ. ಈ ಪೈಕಿ 130 ಅನುದಾನಿತ ಮತ್ತು 903 ಅನುದಾನರಹಿತ ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದಿದ್ದರೆ, 9 ಅನುದಾನಿತ ಮತ್ತು 37 ಅನುದಾನರಹಿತ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ.

ಗ್ರಾಮೀಣ ವಿದ್ಯಾರ್ಥಿಗಳು ಮುಂದು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ 76.76 ಫಲಿತಾಂಶ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಹಿಂದಿನ ಸಾಲಿಗಿಂತ ಶೇ 2 ರಷ್ಟು ಫಲಿತಾಂಶ ಹೆಚ್ಚಳ ಕಂಡು ಬಂದಿದೆ. ನಗರ ಪ್ರದೇಶದಲ್ಲಿ ಶೇ 70.05 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಿಂದಿನ ಸಾಲಿಗಿಂತ ಕೇವಲ ಶೇ 1 ರಷ್ಟು ಹೆಚ್ಚು ಫಲಿತಾಂಶ ಬಂದಿದೆ. ಕಳೆದ ಸಾಲಿನಲ್ಲಿ ಶೇ 69.39 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು.

ಇಂಗ್ಲಿಷ್‌ ಮಾಧ್ಯಮ ಮುನ್ನಡೆ: ಈ ಬಾರಿ ಇಂಗ್ಲಿಷ್‌ ಮಾಧ್ಯಮದ ಶೇ 80.88 ವಿದ್ಯಾರ್ಥಿಗಳು ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಶೇ 70.19 ರಷ್ಟು ತೇರ್ಗಡೆ ಹೊಂದಿದ್ದಾರೆ. ಉರ್ದು ಮಾಧ್ಯಮದಲ್ಲಿ ಶೇ 79.87, ಮರಾಠಿ ಶೇ 70.87, ತೆಲುಗು ಶೇ 61.06, ತಮಿಳು ಶೇ 52.46, ಹಿಂದಿ ಮಾಧ್ಯಮದಲ್ಲಿ ಶೇ 48.81 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

46 ವರ್ಷ ಮೀರಿದವರು ಫೇಲ್‌ !
ಈ ಬಾರಿ 46 ವರ್ಷ ಮೇಲ್ಪಟ್ಟ 138 ಅಭ್ಯರ್ಥಿಗಳು ಖಾಸಗಿಯಾಗಿ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ಒಬ್ಬರೂ ಉತ್ತೀರ್ಣರಾಗಿಲ್ಲ. 46 ರಿಂದ 50 ವರ್ಷ ವಯೋಮಿತಿಯವರು 110 ಜನ ಮತ್ತು 50 ವರ್ಷ ಮೇಲ್ಪಟ್ಟವರು 28 ಮಂದಿ ಪರೀಕ್ಷೆ ಬರೆದಿದ್ದರು.

41 ರಿಂದ 45 ವರ್ಷ ವಯಸ್ಸಿನವರು 5, 36 ರಿಂದ 40 ವರ್ಷ ವಯಸ್ಸಿನವರು 12, 31 ರಿಂದ 35 ವರ್ಷ ವಯಸ್ಸಿನವರು 27 ಮಂದಿ ಉತ್ತೀರ್ಣರಾಗಿದ್ದಾರೆ. 15 ವರ್ಷ ಮೇಲ್ಪಟ್ಟ 21,381 ಅಭ್ಯರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆದಿದ್ದು, 657 ಮಂದಿ (ಶೇ 3.07)ಉತ್ತೀರ್ಣರಾಗಿದ್ದಾರೆ.

ಜೂನ್‌ 21ರಿಂದ ಪೂರಕ ಪರೀಕ್ಷೆ
ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯು ಜೂನ್‌ 21ರಿಂದ 28ರ ವರೆಗೆ ನಡೆಯಲಿದೆ.

ಪರೀಕ್ಷಾ ಶುಲ್ಕವನ್ನು ಮೇ 10ರೊಳಗೆ ಪಾವತಿಸಬೇಕು. ದಂಡಶುಲ್ಕದೊಂದಿಗೆ ಮೇ 15ರವರೆಗೆ ಶುಲ್ಕ ಪಾವತಿಸುವ ಅವಕಾಶವೂ ಇದೆ.

ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಮೇ 17ರೊಳಗೆ ಅರ್ಜಿ ಸಲ್ಲಿಸಬೇಕು. ಉತ್ತರ ಪತ್ರಿಕೆಗಳ ಛಾಯಾಪ್ರತಿಗಳಿಗಾಗಿ ಅರ್ಜಿ ಸಲ್ಲಿಸಲು ಮೇ 13 ಕೊನೆ ದಿನವಾಗಿದೆ.

ತಾತ್ಕಾಲಿಕ ಅಂಕಪಟ್ಟಿ
ವಿದ್ಯಾರ್ಥಿಗಳು ತಾತ್ಕಾಲಿಕ ಅಂಕಪಟ್ಟಿಯನ್ನು ಮುದ್ರಣ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. http//:kseeb.kar.nic.in, http//:karresults.nic.in ನಿಂದ ತಾತ್ಕಾಲಿಕ ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.