ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳು ಸ್ಮಾರ್ಟ್‌ ವಾಚ್‌ ಕಟ್ಟುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 13:32 IST
Last Updated 27 ಡಿಸೆಂಬರ್ 2018, 13:32 IST
   

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಕೊಠಡಿಗಳಲ್ಲಿ ಸಾಮಾನ್ಯ (ಅನಲಾಗ್‌, ಮೆಕ್ಯಾನಿಕಲ್) ಕೈಗಡಿಯಾರಗಳನ್ನು ಬಳಸಲು ಅವಕಾಶ ನೀಡಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಡಿಜಿಟಲ್‌ ಮತ್ತು ಸ್ಮಾರ್ಟ್‌ ವಾಚ್‌ ಕಟ್ಟುವುದನ್ನು ನಿಷೇಧಿಸಿದೆ.

ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಸಮಯ ಪಾಲನೆಗೆ ಕೈಗಡಿಯಾರಗಳು ಅವಶ್ಯಕ. ಡಿಜಿಟಲ್‌ ಮತ್ತು ಸ್ಮಾರ್ಟ್‌ ವಾಚ್‌ಗಳಿಂದ ನಕಲು ಮಾಡಲು ಅವಕಾಶಗಳಿವೆ. ಅದಕ್ಕಾಗಿ ಅವುಗಳನ್ನು ನಿಷೇಧಿಸಿ ಸಾಮಾನ್ಯ ಕೈಗಡಿಯಾರಗಳಿಗೆ ಅವಕಾಶ ನೀಡಲಾಗಿದೆ. ಈ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾಹಿತಿ ತಲುಪಿಸಿ ಎಂದು ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ ಮಂಡಳಿ ಸುತ್ತೋಲೆಯಲ್ಲಿ ಸೂಚಿಸಿದೆ.

‘ಆಯಾ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಸ್ಮಾರ್ಟ್‌ ಮತ್ತು ಸಾಮಾನ್ಯ ಕೈಗಡಿಯಾರಗಳನ್ನು ಗುರುತಿಸಲಿದ್ದಾರೆ. ಅನುಮಾನ ಬಂದರೆ, ಕೈಗಡಿಯಾರವನ್ನು ಕೇಂದ್ರದ ಹೊರಗೆ ಕಳಚಿಟ್ಟು ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಿದ್ದಾರೆ. ನಿಯಮ ಮೀರಿ ಯಾರಾದರೂ ನಿಷೇಧಿತ ವಾಚ್‌ಗಳನ್ನು ಬಳಸಿದರೆ, ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ’ ಎಂದುಮಂಡಳಿ ನಿರ್ದೇಶಕಿ ವಿ.ಸುಮಂಗಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕೆಪಿಎಸ್‌ಸಿಈ ಹಿಂದೆ ನಡೆಸಿದ್ದ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಮಾರ್ಟ್‌ ವಾಚ್‌ಗಳನ್ನು ಬಳಸಿ ನಕಲು ಮಾಡಿದ ಪ್ರಕರಣಗಳು ಹೊರಬಿದ್ದಿದ್ದವು. ಪ್ರಾಮಾಣಿಕವಾಗಿ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಈ ನಿಯಮದಿಂದ ಅನುಕೂಲವೇ ಆಗಲಿದೆ’ ಎಂದು ಯಾದಗಿರಿಯ ಪ್ರೌಢಶಾಲೆಯೊಂದರ ಶಿಕ್ಷಕರೊಬ್ಬರು ಮಂಡಳಿಯ ಕ್ರಮವನ್ನು ಸ್ವಾಗತಿಸಿದರು.

‘ಸ್ಮಾರ್ಟ್‌ ವಾಚ್‌ಗಳನ್ನು ನಗರ ಪ್ರದೇಶದ, ಹೆಚ್ಚು ದುಡ್ಡು ಇರುವ ಕೆಲವೊಂದಿಷ್ಟು ವಿದ್ಯಾರ್ಥಿಗಳು ಮಾತ್ರ ಖರೀದಿಸಬಹುದು.ಹೆಚ್ಚಾಗಿ ಕಟ್ಟಿಕೊಳ್ಳುವ ಸಾಮಾನ್ಯ ವಾಚ್‌ಗಳ ಬಳಕೆಗೆ ಅವಕಾಶ ನೀಡಿರುವುದು ಉತ್ತಮ ನಿರ್ಧಾರ. ಈ ನಿಯಮದಿಂದ ಅನುಕೂಲ ಆಗಲಿದೆ ಹೊರತು, ಯಾವುದೇ ತೊಂದರೆ ಆಗುವುದಿಲ್ಲ’ ಎಂದು 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಅಭಿಪ್ರಾಯಪಟ್ಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.