ADVERTISEMENT

‘ನಾಳೆ ಸಮಾವೇಶ: 10 ಲಕ್ಷ ಜನ ಸೇರುವ ನಿರೀಕ್ಷೆ’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 20:13 IST
Last Updated 5 ಫೆಬ್ರುವರಿ 2021, 20:13 IST

ಬೆಂಗಳೂರು: ‘ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಫೆ.7 ರಂದು ನಗರದಲ್ಲಿ ಬಹಿರಂಗ ಸಮಾವೇಶ ಆಯೋಜಿಸಲಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು.

‘ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ(ಬಿಐಇಸಿ) ಮೈದಾನದಲ್ಲಿ ಸಮಾವೇಶ ನಡೆಯಲಿದೆ. ರಾಜ್ಯದೆಲ್ಲೆಡೆಯಿಂದ ಸಮುದಾಯದ ಜನರು ಬರಲಿದ್ದಾರೆ. ನಮ್ಮ ಬೇಡಿಕೆ ಪರಿಗಣಿಸಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ಈ ಸಮಾವೇಶ ನಡೆಸಲಾಗುತ್ತಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಈ ಹೋರಾಟ ಆರಂಭಕ್ಕೂ ಮುನ್ನವೇ ಸಮಿತಿಯಿಂದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒಪ್ಪಿಗೆ ಪಡೆದಿದ್ದೇವೆ. ಯಾರನ್ನೋ ಕಡೆಗಣಿಸಿ, ಇನ್ಯಾರನ್ನೋ ವೈಭವೀಕರಿಸಲು ಈ ಹೋರಾಟ ನಡೆಸುತ್ತಿಲ್ಲ. ಸಮಾವೇಶಕ್ಕೆ ಸಿದ್ದರಾಮಯ್ಯ ಅವರೂ ಬರಬೇಕು ಎಂದು ನಾವು ಬಯಸುತ್ತೇವೆ’ ಎಂದು ಈಶ್ವರಾನಂದಪುರಿ ಸ್ವಾಮೀಜಿ ಸ್ಪಷ್ಟಪಡಿಸಿದರು.

ADVERTISEMENT

‘ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ನೀಡುತ್ತಿರುವ ಮನ್ನಣೆ ನಮಗೆ ದೊರಕಿಲ್ಲ ಎಂಬುದು ಸುಳ್ಳು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೋರಾಟ ಆರಂಭವಾದ ದಿನದಿಂದ ನಿರಂತರ ಸಂಪರ್ಕದಲ್ಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.