ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ: ಮುಚ್ಚಿದ ಲಕೋಟೆ ವರದಿಗೆ ಆಕ್ಷೇಪ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ 11 ಜನ ಮೃತಪಟ್ಟ ಘಟನೆ: ಪಿಐಎಲ್‌ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 16:03 IST
Last Updated 17 ಜೂನ್ 2025, 16:03 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿರುವುದಕ್ಕೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುತ್ತಿರುವ ಸರ್ಕಾರದ ನಡೆಗೆ ಪ್ರಕರಣದ ಮಧ್ಯಂತರ ಅರ್ಜಿದಾರರ ಪರ ಹಿರಿಯ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ಮುಂದುವರಿಸಿತು.

ಅಂತೆಯೇ, ಈ ಅರ್ಜಿಯಲ್ಲಿ ಮಧ್ಯಂತರ ಅರ್ಜಿದಾರರಾಗಲು ಬಯಸಿರುವ ಘಟನೆಯಲ್ಲಿ ಮೃತಪಟ್ಟ 19 ವರ್ಷದ ವಿದ್ಯಾರ್ಥಿ ಜಿ.ಪ್ರಜ್ವಲ್‌ ಅವರ ತಂದೆ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ ಅವರು, ‘ಸಾರ್ವಜನಿಕರ ಹಿತದೃಷ್ಟಿಯಿಂದ ವರದಿಯಲ್ಲಿನ ಅಂಶ ಬಹಿರಂಗವಾಗಬೇಕು. ಸರ್ಕಾರ ಯಾವ ಮಾಹಿತಿಯನ್ನೂ ಮುಚ್ಚಿಡಬಾರದು. ಸರ್ಕಾರ ಒಂದು ವೇಳೆ ಕೋರ್ಟ್‌ಗೆ ಸಂಪೂರ್ಣ ತಪ್ಪು ವರದಿ ನೀಡಿದರೂ ಅದು ಯಾರಿಗೂ ತಿಳಿಯುವುದಿಲ್ಲ’ ಎಂದು ಆಕ್ಷೇಪಿಸಿದರು.

ADVERTISEMENT

‘ಸರ್ಕಾರ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಲ್ಲಿ ಸರ್ಕಾರ ಪಾರದರ್ಶಕ ನಡೆ ಪ್ರದರ್ಶಿಸಬೇಕು. ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಅನುಸರಿಸಬೇಕು. ಮಾಹಿತಿಯ ಹಕ್ಕನ್ನು ಗೌರವಿಸಬೇಕು. ಇಲಿ, ಬೆಕ್ಕಿನ ಆಟ ಆಡುವುದು ಸರಿಯಲ್ಲ’ ಎಂದು ಪ್ರತಿಪಾದಿಸಿ, ‘ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವುದು ಸರಿಯಲ್ಲ’ ಎಂಬ ಸುಪ್ರೀಂ ಕೋರ್ಟ್‌ ತೀರ್ಪಿನ ಪೂರ್ವನಿದರ್ಶನವೊಂದನ್ನು ನ್ಯಾಯಪೀಠಕ್ಕೆ ತಿಳಿಸಿದರು.

ಇದೇ ಆಗ್ರಹಕ್ಕೆ ಮಧ್ಯಂತರ ಅರ್ಜಿದಾರರಾಗಲು ಬಯಸಿರುವ ಇತರ ಅರ್ಜಿದಾರರ ಪರ ವಕೀಲರೂ ದನಿಗೂಡಿಸಿ, ‘ಸರ್ಕಾರ ವರದಿ ಬಹಿರಂಗಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

* ನಾವು ಕೇಳಿರುವ ಪ್ರಶ್ನೆಗಷ್ಟೇ ಪಿಐಎಲ್‌ ಮಿತಿ

* ಅಮಿಕಸ್‌ ಕ್ಯೂರಿ ನೇಮಕ ಅಗತ್ಯ–ಪೀಠ

ದಾಖಲೆ ಹಂಚಿಕೊಳ್ಳುವುದಕ್ಕೆ ಆಕ್ಷೇಪವಿಲ್ಲ. ನ್ಯಾಯಾಂಗ ಆಯೋಗದ ವಿಚಾರಣೆ ಬಾಕಿ ಇದ್ದು ಯಾರಿಗೂ ಪೂರ್ವಗ್ರಹ ಭಾವನೆ ಬರಬಾರದು ಎಂಬ ಉದ್ದೇಶದಿಂದ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದೆ
ಕೆ.ಶಶಿಕಿರಣ ಶೆಟ್ಟಿ ಅಡ್ವೊಕೇಟ್‌ ಜನರಲ್‌

ಕೆಎಸ್‌ಸಿಎ ಆರ್‌ಸಿಬಿ ಡಿಎನ್‌ಎಗೆ ನೋಟಿಸ್‌

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ‘ಮುಚ್ಚಿದ ಲಕೋಟೆಯಲ್ಲಿನ ವಿವರಗಳನ್ನು ಮಧ್ಯಂತರ ಅರ್ಜಿದಾರರಾಗಲು ಬಯಸಿರುವವರಿಗೂ ಒದಗಿಸಬೇಕು’ ಎಂಬ ಮನವಿಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನವನ್ನು ಪ್ರಕಟಿಸಲಿಲ್ಲ. ‘ಈ ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಅಗತ್ಯವಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತಲ್ಲದೆ ಕೆಎಸ್‌ಸಿಎ ಆರ್‌ಸಿಬಿ ಮತ್ತು ಡಿಎನ್‌ಎಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.