ADVERTISEMENT

ನವೆಂಬರ್ 22ರಿಂದ ಕಲಬುರಗಿ-ಬೆಂಗಳೂರು ವಿಮಾನ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 9:02 IST
Last Updated 13 ನವೆಂಬರ್ 2019, 9:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ನವೆಂಬರ್ 22ರಿಂದ ಕಲಬುರಗಿ - ಬೆಂಗಳೂರು ನಡುವಿನ ವಿಮಾನ ಸಂಚಾರ ಆರಂಭಗೊಳ್ಳಲಿದ್ದು, ಸ್ಟಾರ್ ಏರ್ ಸಂಸ್ಥೆಯ ವಿಮಾನ ಬೆಂಗಳೂರಿನಿಂದ ಮಧ್ಯಾಹ್ನ ಹೊರಟು ಕಲಬುರಗಿಯಲ್ಲಿ ಇಳಿಯಲಿದೆ.

ಸ್ಟಾರ್ ಏರ್ ಸಂಸ್ಥೆಯ ವಿಮಾನ ಬೆಂಗಳೂರಿನಿಂದ ಮಧ್ಯಾಹ್ನ 12.20ಕ್ಕೆ ಹೊರಟು 1.25ಕ್ಕೆ ಕಲಬುರಗಿಯಲ್ಲಿ ಇಳಿಯಲಿದೆ. ಮತ್ತೆ ಕಲಬುರಗಿಯಿಂದ ಅದೇ ದಿನ ಮಧ್ಯಾಹ್ನ 1.55ಕ್ಕೆ ಹೊರಟು 3ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‌ಇಳಿಯಲಿದೆ.

ಸಂಜಯ್ ಘೊಡಾವತ್ ಸಮೂಹದ ಸ್ಟಾರ್ ಏರ್ ಸಂಸ್ಥೆ ಕಲಬುರಗಿ-ಬೆಂಗಳೂರು ಮಧ್ಯೆ ವಿಮಾನದ ಟಿಕೆಟ್ ಬುಕ್ಕಿಂಗ್ ‌ಆರಂಭಿಸುತ್ತಿದ್ದಂತೆಯೇ ಸಂಸದ ಡಾ.ಉಮೇಶ ಜಾಧವ್, ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಹೈದರಾಬಾದ್ ಕರ್ನಾಟಕ‌ ಕೈಗಾರಿಕಾ ಮತ್ತು ವಾಣಿಜ್ಯ ‌ಸಂಸ್ಥೆ ಅಧ್ಯಕ್ಷ ಅಮರನಾಥ ಪಾಟೀಲ ತಮ್ಮ ಟಿಕೆಟ್ ‌ಕಾಯ್ದಿರಿಸಿದ್ದಾರೆ.

ADVERTISEMENT

ಈ ಕುರಿತು ಟ್ವೀಟ್ ಮಾಡಿರುವ ಸ್ಟಾರ್ ಏರ್ ನಿರ್ದೇಶಕ ಶ್ರೇಣಿಕ್ ಘೊಡಾವತ್, 'ಪ್ರಾಯೋಗಿಕವಾಗಿ ‌ವಾರದಲ್ಲಿ ಮೂರು ದಿನ ವಿಮಾನ ಸಂಚಾರ ನಡೆಸಲಿದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ವಾರದ ಎಲ್ಲ ದಿನವೂ ಸಂಚಾರ ಆರಂಭಿಸಲಾಗುವುದು' ಎಂದು ತಿಳಿಸಿದ್ದಾರೆ.

ವಿಮಾನದ ಟಿಕೆಟ್ ಮೂಲ ಬೆಲೆ ₹2800 ಇದ್ದು, ಬೇಡಿಕೆ ಹೆಚ್ಚಿದಂತೆ ದರವೂ (ಡೈನಾಮಿಕ್ ಪ್ರೈಸಿಂಗ್) ಹೆಚ್ಚಲಿದೆ.

ಬುಧವಾರ ‌ಬೆಳಿಗ್ಗೆವರೆಗೆ 48 ಜನ ಬುಕ್ಕಿಂಗ್ ‌ಮಾಡಿದ್ದಾರೆ. ಎರಡು ಸೀಟುಗಳು ಮಾತ್ರ ಖಾಲಿ ಇವೆ. ಆಸಕ್ತರು starair.in ಜಾಲತಾಣಕ್ಕೆ ‌ಭೇಟಿ ನೀಡಿ ಟಿಕೆಟ್ ಬುಕ್ಕಿಂಗ್ ‌ಮಾಡಬಹುದು.

ಇಂಡಿಗೋದಿಂದಲೂ ಶೀಘ್ರ ಬುಕ್ಕಿಂಗ್: ಇಂಡಿಗೊ ಏರ್ ಲೈನ್ಸ್ ಕಲಬುರಗಿ-ಬೆಂಗಳೂರು ಮಧ್ಯೆ ಶೀಘ್ರ ಬುಕ್ಕಿಂಗ್ ಆರಂಭಿಸಲಿದೆ. ಬಳಿಕ ದೆಹಲಿ ಬಳಿಯ ಹಿಂಡನ್, ತಿರುಪತಿಗೆ ವಿಮಾನ ಸಂಚಾರ ಆರಂಭಗೊಳ್ಳಲಿದೆ.

ಈ ಭಾಗದ ಉದ್ಯಮಿಗಳು ಹೆಚ್ಚು ಮುಂಬೈ ‌ಮತ್ತು ಹೈದರಾಬಾದ್ ‌ಮಧ್ಯೆ ವ್ಯವಹಾರಿಕ ಸಂಪರ್ಕ ಹೊಂದಿರುವುದರಿಂದ ಈ ಎರಡು ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಬೇಕು ಎಂದು ಎಚ್ ಕೆಸಿಸಿಐ ಅಧ್ಯಕ್ಷ ಅಮರನಾಥ ‌ಪಾಟೀಲ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.