ADVERTISEMENT

ಹೋಟೆಲ್‌ಗಳಲ್ಲಿ ತಾತ್ಕಾಲಿಕ ಆಸ್ಪತ್ರೆ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 19:58 IST
Last Updated 16 ಏಪ್ರಿಲ್ 2021, 19:58 IST
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ಮಧ್ಯಮ ಮತ್ತು ಸಣ್ಣ ಪ್ರಮಾಣದ ರೋಗ ಲಕ್ಷಣಗಳುಳ್ಳ ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ತಕ್ಷಣವೇ ಹೋಟೆಲ್‌ಗಳ ಜತೆ ಒಡಂಬಡಿಕೆ ಮಾಡಿಕೊಂಡು ತಾತ್ಕಾಲಿಕ ಆಸ್ಪತ್ರೆಗಳನ್ನು ಆರಂಭಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಾರ್ಪೋರೇಟ್‌ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ.

ಕೋವಿಡ್‌ ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಶುಕ್ರವಾರ ತಮ್ಮ ನಿವಾಸದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಜತೆ ದೀರ್ಘ ಕಾಲ ಸಭೆ ನಡೆಸಿದರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸುಧಾಕರ್‌, ‘ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಶೇಕಡ 95ರಷ್ಟು ಮಂದಿಗೆ ಕಡಿಮೆ ರೋಗ ಲಕ್ಷಣಗಳು ಇರುತ್ತವೆ. ಶೇ 5ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯಬೇಕಾಗುತ್ತದೆ. ಹೆಚ್ಚು ಸಮಸ್ಯೆ ಇರುವವರಿಗಷ್ಟೇ ಆಸ್ಪತ್ರೆಗೆ ಪ್ರವೇಶ ನೀಡಬೇಕು. ಉಳಿದವರಿಗೆ ಹೋಟೆಲ್‌ಗಳಲ್ಲಿ ಆರೈಕೆ ಕೇಂದ್ರ ತೆರೆದು, ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ’ ಎಂದರು.

ADVERTISEMENT

ರೋಗ ಲಕ್ಷಣ ಇಲ್ಲದವರನ್ನು ಮನೆಗಳಲ್ಲೇ ಪ್ರತ್ಯೇಕವಾಸದಲ್ಲಿ ಇರಿಸುವುದು ಅಥವಾ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸುವುದಕ್ಕೆ ಸಿದ್ಧತೆ ಮಾಡುವಂತೆ ಸೂಚಿಸಲಾಗಿದೆ. ಕ್ವಾರಂಟೈನ್‌ನಲ್ಲಿ ಇರುವವರು ಹೊರಗೆ ಸುತ್ತಾಡದಂತೆ ತಡೆಯಲು ಅಳಿಸಲಾಗದ ಶಾಯಿಯಿಂದ ಮೊಹರು ಹಾಕಲಾಗುವುದು. ಕಂಟೈನ್ಮೆಂಟ್‌ ವಲಯ ಮತ್ತು ಕಿರು ಕಂಟೈನ್ಮೆಂಟ್‌ ವಲಯಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಕ್ಕೂ ತಾಕೀತು ಮಾಡಲಾಗಿದೆ ಎಂದು ಹೇಳಿದರು.

ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಸರ್ಕಾರದಿಂದ ದಾಖಲಿಸುವ ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲು ಸೂಚಿಸಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1,000 ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 5,000 ಹಾಸಿಗೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಕಾಯ್ದಿರಿಸುವಂತೆ ನಿರ್ದೇಶನ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ದಾಖಲಾತಿ ಮತ್ತು ಚಿಕಿತ್ಸೆ ಮೇಲೆ ನಿಗಾ ಇಡಲು ಹಿರಿಯ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಆಮ್ಲಜನಕ ಸಿಲಿಂಡರ್‌ಗೆ ಬೇಡಿಕೆ

‘5,000 ಆಮ್ಲಜನಕ ಸಿಲಿಂಡರ್‌ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲು ತೀರ್ಮಾನಿಸಲಾಗಿದೆ. ದೀರ್ಘ ಕಾಲ ಆಮ್ಲಜನಕ ಪೂರೈಸುವುದಕ್ಕೆ ಅನುಕೂಲವಾಗುವಂತೆ ಜಂಬೋ ಸಿಲಿಂಡರ್‌ಗಳ ಖರೀದಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ತ್ವರಿತವಾಗಿ ಪ್ರಾರಂಭಿಸಲು ಸೂಚನೆ ನೀಡಿದ್ದಾರೆ’ ಎಂದು ಸುಧಾಕರ್‌ ಹೇಳಿದರು.

24 ಗಂಟೆಗಳಲ್ಲೇ ವರದಿ

ಕೋವಿಡ್‌ ಪತ್ತೆ ಪರೀಕ್ಷಾ ವರದಿಯನ್ನು 24 ಗಂಟೆಗಳೊಳಗೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ನರ್ಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಕ್ಕೂ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್‌ ಸಭೆಯಲ್ಲಿದ್ದರು.

20ಕ್ಕೂ ಅಧಿಕ ತಾರಾ ಹೋಟೆಲ್‌ಗಳಲ್ಲಿ ಆರೈಕೆ

ಬೆಂಗಳೂರು: ನಗರದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಏರಿಕೆ ಕಾಣುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ತಲೆದೋರಿದೆ. ಹೀಗಾಗಿ, ಸರ್ಕಾರದ ಸೂಚನೆ ಅನುಸಾರ ಖಾಸಗಿ ಆಸ್ಪತ್ರೆಗಳು 20ಕ್ಕೂ ಅಧಿಕ ತಾರಾ ಹೋಟೆಲ್‌ಗಳಲ್ಲಿ 2 ಸಾವಿರ ಹಾಸಿಗೆಗಳನ್ನು ಸಜ್ಜುಗೊಳಿಸಲು ಮುಂದಾಗಿವೆ.

ಕೆಲ ದಿನಗಳಿಂದ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಏರಿಕೆ ಕಂಡಿದೆ. ಇದರಿಂದಾಗಿ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗಳು ಭರ್ತಿಯಾಗಿವೆ. ಹೀಗಾಗಿ, ಕೆಲ ಸೋಂಕಿತರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಖಾಸಗಿ ಆಸ್ಪತ್ರೆಗಳ ಜತೆಗೆ ಮಾತುಕತೆ ನಡೆಸಿ, ಶಿಫಾರಸು ಮಾಡುವ ರೋಗಿಗಳಿಗೆ ಈ ಮೊದಲಿನಂತೆ ಶೇ 50 ರಷ್ಟು ಹಾಸಿಗೆಗಳನ್ನು ಮೀಸಲಿಡುವಂತೆ ಸೂಚಿಸಿದೆ. ಅದೇ ರೀತಿ, ಸೋಂಕು ಲಕ್ಷಣಗಳು ಅಷ್ಟಾಗಿ ಗೋಚರಿಸದವರಿಗೆ ಹೋಟೆಲ್‌ಗಳಲ್ಲಿ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದೆ. ಅದರಂತೆ ಖಾಸಗಿ ಆಸ್ಪತ್ರೆಗಳು ಹತ್ತಿರದ ಹೋಟೆಲ್‌ಗಳನ್ನು ಸಂಪರ್ಕಿಸಿ, ಕೋವಿಡ್‌ ಆರೈಕೆ ಕೇಂದ್ರಗಳನ್ನು ನಿರ್ಮಿಸಲಾರಂಭಿಸಿವೆ.

ಕೋವಿಡ್‌ ಕಾಣಿಸಿಕೊಂಡ ಬಳಿಕ ವ್ಯಾಪಾರ ವ್ಯವಹಾರ ಸಂಬಂಧ ವಿದೇಶ ಹಾಗೂ ಅನ್ಯ ರಾಜ್ಯಗಳಿಂದ ಇಲ್ಲಿಗೆ ಬರುವ ಪ್ರತಿನಿಧಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ವಾಣಿಜ್ಯ ಸಭೆಗಳು ಕೂಡ ಆನ್‌ಲೈನ್‌ ಮೂಲಕವೇ ನಡೆಯುತ್ತಿದೆ. ಇದರಿಂದಾಗಿ ತಾರಾ ಹೋಟೆಲ್‌ಗಳಲ್ಲಿ ಬಹುತೇಕ ಕೊಠಡಿಗಳು ಖಾಲಿಯಿವೆ. ಹಾಗಾಗಿ, ಕೋವಿಡ್ ಚಿಕಿತ್ಸೆಗೆ ಹಾಸಿಗೆ ಒದಗಿಸಲು ಹೋಟೆಲ್‌ಗಳ ಮುಖ್ಯಸ್ಥರು ಕೂಡ ಆಸಕ್ತಿ ತೋರಿದ್ದಾರೆ. ಸುಗುಣ, ಪೀಪಲ್ ಟ್ರೀ, ಸಂಜೀವಿನಿ, ಅಪೋಲೊ, ಕೊಲಂಬಿಯಾ ಏಷ್ಯಾ, ಆಸ್ಟರ್‌ ಸಿಎಂಐ ಸೇರಿದಂತೆ ನಗರದ ಪ್ರಮುಖ ಆಸ್ಪತ್ರೆಗಳು ಈಗಾಗಲೇ ಕೆಲ ಹೋಟೆಲ್‌ಗಳನ್ನು ಗುರುತಿಸಿ, ಸೇವೆಗೆ ಸಜ್ಜುಗೊಳಿಸುತ್ತಿವೆ. ಎಲ್ಲ ಸೌಲಭ್ಯಗಳೊಂದಿಗೆ ವಿಧಿಸಬಹುದಾದ ಗರಿಷ್ಠ ಶುಲ್ಕವನ್ನು ಸರ್ಕಾರವು ಕಳೆದ ವರ್ಷ ನಿಗದಿಮಾಡಿತ್ತು. ಅದೇ ದರ ಮುಂದುವರಿಯಲಿದೆ.

ಹತ್ತಿರದ ಹೋಟೆಲ್‌ಗೆ ಆದ್ಯತೆ: ಸದ್ಯ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಕೋಟಾದಡಿ 1,565 ಹಾಸಿಗೆಗಳನ್ನು ಮೀಸಲಿರಿಸಿವೆ. ಅದರಲ್ಲಿ 639 ಹಾಸಿಗೆಗಳು ಖಾಲಿಯಿವೆ. ನೇರವಾಗಿ ಬಂದು ಚಿಕಿತ್ಸೆ ಪಡೆದುಕೊಳ್ಳುವವರಿಗೆ 5,499 ಹಾಸಿಗೆಗಳನ್ನು ಆಸ್ಪತ್ರೆಗಳು ಗುರುತಿಸಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 65 ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ 5 ಹಾಸಿಗೆಗಳು ಮಾತ್ರ ಖಾಲಿಯಿವೆ.

‘ಮಣಿಪಾಲ್, ಅಪೋಲೊ, ನಾರಾಯಣ ಹೃದಯಾಲಯ ಸೇರಿದಂತೆ 5 ಆಸ್ಪತ್ರೆಗಳು ಈಗಾಗಲೇ ಹೋಟೆಲ್‌ಗಳನ್ನು ಕೋವಿಡ್‌ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಿವೆ. ಇನ್ನಷ್ಟು ಆಸ್ಪತ್ರೆಗಳು ಹೋಟೆಲ್‌ಗಳನ್ನು ಗುರುತಿಸಿ, ಅಗತ್ಯ ವ್ಯವಸ್ಥೆ ಮಾಡಿಕೊಳ್ಳುತ್ತಿವೆ. ಆಸ್ಪತ್ರೆಯ ಹತ್ತಿರವಿರುವ ಹೋಟೆಲ್‌ಗಳಿಗೆ ಆದ್ಯತೆ ನೀಡಲಾಗುತ್ತಿದೆ. ದೂರವಾದಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುವುದು ಕಷ್ಟವಾಗುತ್ತದೆ. ಹೋಟೆಲ್‌ಗಳ ಮಾಲೀಕರಿಂದ ಉತ್ತಮ ಸಹಕಾರ ಸಿಗುತ್ತಿದೆ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.