ADVERTISEMENT

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಇಲ್ಲ: ಮುರಳಿಧರರಾವ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 19:45 IST
Last Updated 22 ಡಿಸೆಂಬರ್ 2019, 19:45 IST
   

ನವದೆಹಲಿ: ’ಕರ್ನಾಟಕ ಬಿಜೆಪಿ ಘಟಕದಲ್ಲಿ ಯಾವುದೇ ರೀತಿ ಅಸಮಾಧಾನ ಇಲ್ಲ. ರಾಜ್ಯ ಅಥವಾ ಕೇಂದ್ರದಲ್ಲಿಎಲ್ಲ ನಾಯಕರಿಗೂ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಲಾಗುವುದು‘ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಮುರಳಿಧರ್‌ ರಾವ್‌ ಇಲ್ಲಿ ತಿಳಿಸಿದರು.

’ಮುಂದಿನ ತಿಂಗಳು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡಲಾಗುವುದು‘ ಎಂದು ತಿಳಿಸಿದರು.

’ಕರ್ನಾಟಕದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹೀಗಾಗಿ, ಸಹಜವಾಗಿಯೇ ಎಲ್ಲರೂ ಪ್ರಮುಖ ಹುದ್ದೆಗಳನ್ನು ಬಯಸುತ್ತಾರೆ. ಪ್ರತಿಯೊಬ್ಬರಿಗೂ ಅವಕಾಶ ನೀಡಲಾಗುವುದು‘ ಎಂದರು.

ADVERTISEMENT

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ’ಯಡಿಯೂರಪ್ಪ ಅವರ ವಯಸ್ಸಿನ ಬಗ್ಗೆ ಬಿಜೆಪಿಗೆ ಗೊತ್ತಿದೆ. ಆದರೆ, ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಈ ಬಗ್ಗೆಅನುಮಾನ ಬೇಡ. ಉಳಿದ ಅವಧಿಯನ್ನು ಅವರೇ ಪೂರ್ಣಗೊಳಿಸುತ್ತಾರೆ. ಯಡಿಯೂರಪ್ಪ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

’ಕರ್ನಾಟಕದಲ್ಲಿನ ಭವಿಷ್ಯದ ನಾಯಕರ ಬಗ್ಗೆ ಬಿಜೆಪಿಗೆ ಆತಂಕ ಇಲ್ಲ. ಎಲ್ಲ ಪ್ರದೇಶಗಳ ಮತ್ತು ಸಮುದಾಯಗಳ ಹಲವು ನಾಯಕರು ಪಕ್ಷದಲ್ಲಿದ್ದಾರೆ. ಆರರಿಂದ ಏಳು ಬಾರಿ ಗೆದ್ದ ಹಲವು ಶಾಸಕರಿದ್ದಾರೆ. ಹೀಗಾಗಿ, ನಾಯಕತ್ವದ ಕೊರತೆ ಇಲ್ಲ‘ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.