ADVERTISEMENT

ಅಂಗವಿಕಲ ನೌಕರರಿಗೆ ಉಚಿತ ಬಸ್‌ ಪಾಸ್‌?

ಬೇಡಿಕೆಗೆ ಧ್ವನಿಗೂಡಿಸಿದ ಕಾಯ್ದೆ ಅನುಷ್ಠಾನ ಘಟಕದ ಆಯುಕ್ತ

ಪೀರ್‌ ಪಾಶ, ಬೆಂಗಳೂರು
Published 31 ಡಿಸೆಂಬರ್ 2018, 1:40 IST
Last Updated 31 ಡಿಸೆಂಬರ್ 2018, 1:40 IST
   

ಬೆಂಗಳೂರು: ಕೈ–ಕಾಲುಗಳು ಸ್ವಾಧೀನದಲ್ಲಿ ಇಲ್ಲದ, ಕಣ್ಣು ಕಾಣದ, ಕಿವಿ ಕೇಳದ, ಮಾತು ಬಾರದ ಮೌನಿ ಜೀವಗಳು ಮತ್ತೆ ಉಚಿತ ಬಸ್‌ ಪಾಸ್‌ ಸೌಲಭ್ಯ ಪಡೆಯಬೇಕು ಎಂಬ ಬೇಡಿಕೆಗೆ ಈಗ ಮರುಜೀವ ಬಂದಿದೆ.

ಸರ್ಕಾರಿ ನೌಕರಿಯಲ್ಲಿ ಇರುವ ಅಂಗವಿಕಲರಿಗೆ ಉಚಿತ ಬಸ್‌ ಪಾಸ್‌ ನೀಡಬೇಕು ಎಂಬ ಒತ್ತಾಯಕ್ಕೆ ರಾಜ್ಯ ಅಂಗವಿಕಲ ವ್ಯಕ್ತಿಗಳ ಕಾಯ್ದೆ ಅನುಷ್ಠಾನ ಘಟಕದ ಆಯುಕ್ತರು ಧ್ವನಿಗೂಡಿಸಿದ್ದಾರೆ.

ಉಚಿತ ಬಸ್‌ ಪಾಸ್‌ ಸೌಲಭ್ಯವನ್ನು ಸ್ಥಗಿತಗೊಳಿಸಿರುವ ಬಗ್ಗೆ ಕರ್ನಾಟಕ ಅಂಧರ ಒಕ್ಕೂಟ ಮತ್ತು ಇಂಡಿಯನ್‌ ದಿವ್ಯಾಂಗ ಎಂಪವರ್‌ಮೆಂಟ್‌ ಅಸೋಷಿಯೇಷನ್‌ ಆಯುಕ್ತರ ಗಮನಕ್ಕೆ ತಂದಿದ್ದವು. ಈ ಸೌಲಭ್ಯ ಮರಳಿ ಕಲ್ಪಿಸಬೇಕು ಎಂದೂ ಒತ್ತಾಯಿಸಿದ್ದವು. ಈ ಕುರಿತು ಚರ್ಚೆಗೆ ಹಾಜರಾಗಿ ವಿವರ ನೀಡುವಂತೆ ಕಾಯ್ದೆಯ ಆಯುಕ್ತರು, ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಇತ್ತೀಚೆಗೆ ಪತ್ರದ ಮೂಲಕ ತಿಳಿಸಿದ್ದರು.

ADVERTISEMENT

‘ಅಂಗವಿಕಲರ ಜೀವನ ನಿರ್ವಹಣೆಗೆ ಹೆಚ್ಚುವರಿ ಹಣಕಾಸಿನ ಹೊರೆ ಇರುತ್ತದೆ. ಅವರಿಗೆ ನೆರವಿನ ಅಗತ್ಯವಿದೆ. ಕೆಲವು ಅಂಗವಿಕಲರು ಸಹಾಯಕರನ್ನು ನೇಮಿಸಿಕೊಂಡಿರುತ್ತಾರೆ. ಆ ಹೊರೆಯನ್ನು ಒಂದಷ್ಟು ಇಳಿಸಲು, ಉಚಿತ ಸೌಲಭ್ಯಗಳನ್ನು ನೀಡುವುದು ಸೂಕ್ತ’ ಎಂದು ಅನುಷ್ಠಾನ ಘಟಕದ ಆಯುಕ್ತ ವಿ.ಎಸ್‌.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಇಂಡಿಯನ್‌ ದಿವ್ಯಾಂಗ ಎಂಪವರ್‌ಮೆಂಟ್‌ ಅಸೋಷಿಯೇಷನ್‌ನ ಅಧ್ಯಕ್ಷ, ಮಾತು ಬಾರದ ಕೊಡಕಲ್ ಶಿವಪ್ರಸಾದ್‌, ‘ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ದೆಹಲಿ ರಾಜ್ಯಗಳಲ್ಲಿ ನೌಕರರಿಗೆ ಉಚಿತ ಬಸ್‌ ಪಾಸ್‌ ನೀಡಲಾಗುತ್ತಿದೆ. 1990ರ ದಶಕದಿಂದ ಈ ಸೌಲಭ್ಯ ನಮ್ಮ ರಾಜ್ಯದಲ್ಲೂ ಇತ್ತು.2016ರಲ್ಲಿ ಇದ್ದಕ್ಕಿದ್ದಂತೆ ನಿಲ್ಲಿಸಲಾಯಿತು’ ಎಂದು ಬರಹದ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.

‘ಬಹುತೇಕ ಅಂಗವಿಕಲರಿಗೆ ವಾಹನ ಚಾಲನಾ ಪರವಾನಗಿ ಸಿಗುವುದಿಲ್ಲ. ಸರಿಯಾಗಿ ವಿಳಾಸ ಗೊತ್ತಾಗದೆಅಂಧರು ಬೇರೆ ಸ್ಥಳಗಳಿಗೆ ಹೋಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಉಚಿತ ಬಸ್‌ ಪಾಸ್‌ ಇದ್ದರೆ ಹೆಚ್ಚಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸಿ, ನಿಗದಿತ ಸ್ಥಳ ತಲುಪಬಹುದು’ ಎಂದು ಅಂಧರೊಬ್ಬರು ತಿಳಿಸಿದರು.

‘ಕೆಎಸ್‌ಆರ್‌ಟಿಸಿ ನಷ್ಟದಲ್ಲಿದೆ. ಆ ಕಾರಣಕ್ಕಾಗಿ ಉಚಿತ ಪಾಸ್‌ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ’ ಎನ್ನುತ್ತವೆ ನಿಗಮದ ಮೂಲಗಳು.

‘ನಿಲ್ದಾಣಗಳು ಅಂಗವಿಕಲ ಸ್ನೇಹಿಯಾಗಿರಲಿ’

ಸಾರಿಗೆ ಸಿಬ್ಬಂದಿ ಅಂಗವಿಕಲರೊಂದಿಗೆ ವ್ಯವಹರಿಸುವಾಗ ಸರಿಯಾದ ಪದ ಬಳಸುವಂತೆ ಹಾಗೂ ಅವರೊಂದಿಗೆ ತಾರತಮ್ಯ ಮಾಡದಂತೆ ಆಯುಕ್ತರು ಇತ್ತೀಚಿನ ಸಭೆಯಲ್ಲಿ ಸೂಚಿಸಿದ್ದಾರೆ. ನಿಗಮದ ಎಲ್ಲ ಬಸ್‌ ನಿಲ್ದಾಣಗಳ ಭೌತಿಕ ವಾತಾವರಣ ಹಾಗೂ ಅಲ್ಲಿನ ಶೌಚಾಲಯಗಳು ಅಂಗವಿಕಲ ಸ್ನೇಹಿಯಾಗಿರುವಂತೆ ನೋಡಿಕೊಳ್ಳುವಂತೆ ಕೂಡಾ ಸಲಹೆ ನೀಡಿದ್ದಾರೆ.

ಈಗಿನ ಸೌಲಭ್ಯ: ವಾರ್ಷಿಕ ₹ 660ಗಳನ್ನು ಭರಿಸಿಕೊಂಡು ಅಂಗವಿಕಲರಿಗೆ(ಸರ್ಕಾರಿ ನೌಕರರಲ್ಲದವರು) ರಿಯಾಯಿತಿ ದರದ ಬಸ್‌ ಪಾಸ್‌ ನೀಡಲಾಗುತ್ತಿದೆ. ವಾಸಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿನ ಸ್ಥಳಕ್ಕೆ ಸಂಚರಿಸಲು ಈ ಪಾಸ್‌ ಬಳಸಬಹುದಾಗಿದೆ.

* ನಿರ್ದಿಷ್ಟ ಮೊತ್ತಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಅಂಗವಿಕಲ ನೌಕರರಿಗೂ ಉಚಿತ ಬಸ್‌ ಪಾಸ್‌ ನೀಡಬೇಕು
-ವಿ.ಎಸ್‌.ಬಸವರಾಜು,ಆಯುಕ್ತ,ರಾಜ್ಯ ಅಂಗವಿಕಲ ವ್ಯಕ್ತಿಗಳ ಕಾಯ್ದೆ ಅನುಷ್ಠಾನ ಘಟಕ

* ಸರ್ಕಾರವು ಬಸ್‌ ಪಾಸ್‌ಗಳ ಮೊತ್ತವನ್ನು ನಿಗಮಕ್ಕೆ ಭರಿಸಿದರೆ, ನೌಕರರಿಗೂ ಉಚಿತ ಪಾಸ್‌ ನೀಡುತ್ತೇವೆ
-ರಾಜೇಶ್‌, ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ), ಕೆಎಸ್‌ಆರ್‌ಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.