ADVERTISEMENT

ಇಂದಿನಿಂದ ಮದ್ಯ ಮಾರಾಟ: 4,762 ಅಂಗಡಿಗಳಿಗೆ ಮಾತ್ರ ಅನುಮತಿ

​ಪ್ರಜಾವಾಣಿ ವಾರ್ತೆ
Published 4 ಮೇ 2020, 1:59 IST
Last Updated 4 ಮೇ 2020, 1:59 IST
   

ಬೆಂಗಳೂರು:ನಿರ್ಬಂಧಿತ ವಲಯ ಹೊರತುಪಡಿಸಿ ರಾಜ್ಯದಾದ್ಯಂತ 4,762 ಮದ್ಯದ ಅಂಗಡಿಗಳು ಸೋಮವಾರ ತೆರೆಯಲಿವೆ.

‘ಸಿಎಲ್ 2 (ವೈನ್‌ಶಾಪ್‌ಗಳು, ಎಂಆರ್‌ಪಿ ಔಟ್‌ಲೆಟ್‌ಗಳು) ಮತ್ತು ಸಿಎಲ್‌ 11– ಸಿ (ಎಂಎಸ್‌ಐಎಲ್‌ ಮದ್ಯದಂಗಡಿಗಳು) ಮಾತ್ರ ತೆರೆಯಲಿವೆ.ಈ ಮದ್ಯದಂಗಡಿಗಳು ಮಾಲ್‌ ಅಥವಾ ಸೂಪರ್‌ ಮಾರ್ಕೆಟ್‌ಗಳಲ್ಲಿ ಇದ್ದರೆ ಅಲ್ಲಿ ಮಾರಾಟಕ್ಕೆ ಅವಕಾಶ ಇಲ್ಲ. ಅನುಮತಿ ಇರುವ ಅಂಗಡಿಗಳಲ್ಲಿಬೆಳಿಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಇದೆ.

ರಾಜ್ಯದಲ್ಲಿ ಒಟ್ಟು 11,136 ಮದ್ಯದ ಅಂಗಡಿಗಳಿದ್ದು, ಅವುಗಳಲ್ಲಿ ಶೇ 42.76ರಷ್ಟು ಅಂಗಡಿಗಳು ಮಾತ್ರ ತೆರೆಯಲಿವೆ.ಸದ್ಯ ಎಲ್ಲಾ ಮದ್ಯದ ಅಂಗಡಿಗಳಲ್ಲಿ 27 ಲಕ್ಷ ಬಾಕ್ಸ್ ಮದ್ಯ(ಐಎಂಎಲ್‌) ಮತ್ತು 16 ಲಕ್ಷ ಬಾಕ್ಸ್ ಬಿಯರ್ ದಾಸ್ತಾನಿದೆ. ಹೀಗಾಗಿ ಮದ್ಯ ಪೂರೈಕೆ ತೊಂದರೆ ಆಗುವುದಿಲ್ಲ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಎಲ್ಲಾ ಮದ್ಯದ ಅಂಗಡಿ ತೆರೆಯಲು ಮನವಿ

ಎಲ್ಲಾ 11,136 ಮದ್ಯದ ಅಂಗಡಿಗಳನ್ನೂ ತೆರೆಯಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲು ಮದ್ಯ ಮಾರಾಟಗಾರರ ಸಂಘ ನಿರ್ಧರಿಸಿದೆ.

ಎಲ್ಲಾ ಅಂಗಡಿಗಳನ್ನು ತೆರೆದು ಪಾರ್ಸೆಲ್ ವ್ಯವಸ್ಥೆಗೆ ಮಾತ್ರ ಅನುಮತಿ ನೀಡಿದರೆ ನೂಕುನುಗ್ಗಲು ತಪ್ಪಲಿದೆ. ಅಂತರ ಕಾಯ್ದುಕೊಳ್ಳಲು ಕೂಡ ಅನುಕೂಲ ಆಗಲಿದೆ. ಎಲ್ಲಾಅಬಕಾರಿ ಅಧೀಕ್ಷಕರ ಮೂಲಕ ಮಂಗಳವಾರ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ತಿಳಿದರು.

ಮದ್ಯ ನಿಷೇಧಕ್ಕೆ ಪ್ರಸನ್ನ ಆಗ್ರಹ

‘ವೈದ್ಯರು, ವಿಜ್ಞಾನಿಗಳು, ಮಠಾಧೀಶರು, ಮಹಿಳೆಯರು ಬೇಡ ಎಂದು ಹೇಳಿದರೂ ರಾಜ್ಯ ಸರ್ಕಾರ ಮದ್ಯ ಮಾರಾಟವನ್ನು ಪುನರಾರಂಭಿಸುತ್ತಿರುವುದು ಸರಿಯಲ್ಲ. ಕೂಡಲೇ ಮದ್ಯ ಮಾರಾಟ ನಿಷೇಧಿಸಬೇಕು’ ಎಂದು ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಉದ್ದೇಶಿಸಿ ಭಾನುವಾರ ಅವರು ಟ್ವೀಟ್‌‌ ಮಾಡಿದ್ದಾರೆ.

‘ಸರ್ಕಾರದ ಬೊಕ್ಕಸ ಬರಿದಾಗಿರುವುದರಿಂದ ಈ ನಿರ್ಧಾರ ಕೈಗೊಂಡಿರಬಹುದು. ಆದರೆ, ಸರ್ಕಾರದ ಬೊಕ್ಕಸ ತುಂಬಿದ್ದಾಗಲೂ ಕೂಡ ಅದು ಬಡವರನ್ನೇನೂ ತಲುಪಲಿಲ್ಲ. ರಾಜಕಾರಣಿಗಳು ಪ್ರಾಮಾಣಿಕರಾಗಿದ್ದಾಗಲೂ ಈ ಹಣ ಬಡವರನ್ನು ತಲುಪಬಹುದಾದಷ್ಟು ತಲುಪಲಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.