ADVERTISEMENT

ಓಮೈಕ್ರಾನ್ ಹರಡುವಿಕೆ ತಡೆ: ಮುನ್ನೆಚ್ಚರಿಕಾ ಕ್ರಮಕ್ಕೆ ಆರೋಗ್ಯ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 19:31 IST
Last Updated 22 ಡಿಸೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್ ಹರಡುವಿಕೆ ತಡೆಗೆ ಸೋಂಕಿತರ ಸಂಪರ್ಕ ಪತ್ತೆ, ಪ್ರತ್ಯೇಕ ವಾಸಕ್ಕೆ ಒಳಪಡಿಸುವಿಕೆ ಸೇರಿದಂತೆ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಈ ಬಗ್ಗೆ ಇಲಾಖೆಯ ಆಯುಕ್ತ ಟಿ.ಎಚ್. ಅನಿಲ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ‘ರಾಜ್ಯದಲ್ಲಿ ಸದ್ಯ ಪ್ರತಿನಿತ್ಯ ಸರಾಸರಿ 300 ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಸೋಂಕು ದೃಢ ಪ್ರಮಾಣವು ಶೇ 0.25ರಿಂದ ಶೇ 0.30 ರಷ್ಟು ದೃಢಪಡುತ್ತಿದೆ. ಓಮೈಕ್ರಾನ್ ಪ್ರಕರಣಗಳು ವಿವಿಧ ದೇಶಗಳಲ್ಲಿ ವೇಗವಾಗಿ ಹರಡುತ್ತಿವೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿಯೂ ಹೊಸ ತಳಿಯ ಪ್ರಕರಣಗಳು ಕಾಣಿಸಿಕೊಂಡಿವೆ. ಹೀಗಾಗಿ, ಕೋವಿಡ್ ಮೂರನೇ ಅಲೆ ತಡೆಯಲು ನೇರ ಹಾಗೂ ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಿ, ಪ್ರತ್ಯೇಕ ವಾಸಕ್ಕೆ ಒಳಪಡಿಸಬೇಕು’ ಎಂದು ಹೇಳಿದ್ದಾರೆ.

‘ವ್ಯಕ್ತಿಗೆ ಸೋಂಕು ದೃಢಪಟ್ಟ 24 ಗಂಟೆಗಳ ಒಳಗೆ ಅವರ ನೇರ ಹಾಗೂ ಪರೋಕ್ಷ ಸಂಪರ್ಕಿತರನ್ನು ಗುರುತಿಸಬೇಕು. ನೇರ ಸಂಪರ್ಕಿತರಿಗೆ ಮೊದಲ ಹಾಗೂ ಎಂಟನೇ ದಿನದಂದು ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಬೇಕು. ಅದೇ ರೀತಿ, ಅಂತರರಾಷ್ಟ್ರೀಯ ಪ್ರಯಾಣಿಕರು ಹಾಗೂ ಗುರುತಿಸಲಾದ ಅಪಾಯಕಾರಿ ದೇಶಗಳಿಂದ ಬಂದವರನ್ನು ಮನೆಗಳಲ್ಲಿ ಪ್ರತ್ಯೇಕ ವಾಸಕ್ಕೆ ಒಳಪಡಿಸಿ, ಎಂಟನೇ ದಿನಕ್ಕೆ ಮತ್ತೊಮ್ಮೆ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಬೇಕು. ಸೋಂಕಿತರಾದಲ್ಲಿ ಕೋವಿಡ್ ಮಾರ್ಗಸೂಚಿ ಅನುಸಾರ ಚಿಕಿತ್ಸೆ ನೀಡಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

‘ಆರೋಗ್ಯ ಕಾರ್ಯಕರ್ತರು, ಸಾರ್ವಜನಿಕ ಆರೋಗ್ಯ ತಪಾಸಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ನೆರವಿನಿಂದ ಸೋಂಕು ಸಂಪರ್ಕಿತರನ್ನು ಪತ್ತೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿನ ವಾರ್‌ ರೂಮ್‌ಗಳನ್ನು ಮತ್ತೆ ಸಕ್ರಿಯಗೊಳಿಸಬೇಕು.ಸೋಂಕಿತರಿಗೆಚಿಕಿತ್ಸೆಯ ವಿಧಾನವನ್ನು ನಿರ್ಧರಿಸಿ, ದಾಖಲಿಸಬೇಕು. ಸಂಪರ್ಕಿತರ ಮೇಲೆ ನಿಗಾ ಸೇರಿದಂತೆ ವಿವಿಧ ಕಾರ್ಯಚಟುವಟಿಕೆಗೆ ತಂತ್ರಾಂಶಗಳ ನೆರವನ್ನು ಪಡೆದುಕೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.