ADVERTISEMENT

ಕ್ರೈಸ್ತರ ಕಲ್ಯಾಣಕ್ಕಾಗಿ ಸುತ್ತೋಲೆ: ರಾಜ್ಯ ಸರ್ಕಾರ ಸಮರ್ಥನೆ

ಹೈಕೋರ್ಟ್‌ಗೆ ಸರ್ಕಾರದ ಆಕ್ಷೇಪಣೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 16:21 IST
Last Updated 3 ಡಿಸೆಂಬರ್ 2021, 16:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕ್ರೈಸ್ತ ಸಮುದಾಯದ ಕಲ್ಯಾಣದ ಉದ್ದೇಶದಿಂದಲೇ ರಾಜ್ಯದಲ್ಲಿನ ಚರ್ಚ್‌ಗಳ ಮಾಹಿತಿ ಸಂಗ್ರಹಿಸಲು ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಸೂಚಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ನೀಡಿರುವ ಹೇಳಿಕೆಯಲ್ಲಿ ತನ್ನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದೆ.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿರುವ ಸರ್ಕಾರ ಈ ಕುರಿತ ವಿವರಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ನೀಡಿದೆ.

ಹೇಳಿಕೆಯಲ್ಲಿ ಏನಿದೆ?: ‘ಅಲ್ಪಸಂಖ್ಯಾತ ಸಮುದಾಯಗಳ ಕ್ಷೇಮಾಭಿವೃದ್ಧಿಗಾಗಿ ಸೂಕ್ತ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತದೆ. ಅದಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಣಕಾಸು ಮೀಸಲಿಡಲಾಗುತ್ತದೆ.ಕ್ರೈಸ್ತರ ಅಭಿವೃದ್ಧಿ ಯೋಜನೆಯಡಿ ಒಟ್ಟು 1923 ಕ್ರೈಸ್ತ ಸಂಸ್ಥೆಗಳಿಗೆ 2011ರಿಂದ ಸುಮಾರು ₹ 412 ಕೋಟಿ ಮಂಜೂರು ಮಾಡಲಾಗಿದೆ. ಈ ಯೋಜನೆಯ ಸೌಲಭ್ಯಗಳನ್ನು ಕ್ರೈಸ್ತ ಸಮುದಾಯದವರಿಗೆ ತಲುಪಿಸುವ ಉದ್ದೇಶದಿಂದಲೇ ಇಲಾಖೆ ಸುತ್ತೋಲೆ ಹೊರಡಿಸಿದೆ’ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣ, ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ದುರಸ್ತಿ, ನವೀಕರಣ, ವಸತಿ ಸಹಿತ ಮತ್ತು ವಸತಿ ರಹಿತ ಶಾಲೆಗಳ ಆರಂಭ, ಹಾಸ್ಟೆಲ್ ನಿರ್ಮಾಣ, ಚರ್ಚ್, ಗುರುದ್ವಾರ, ಜೈನ ಬಸದಿಗಳ ದುರಸ್ತಿ ಕಾರ್ಯ ಮತ್ತು ಅನಾಥಾಶ್ರಮಗಳಿಗೆ ಹಣಕಾಸು ನೆರವು ಕಲ್ಪಿಸುವುದನ್ನು ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯವೇನೋಡಿಕೊಳ್ಳುತ್ತದೆ. ಒಂದು ವೇಳೆ ಅಲ್ಪಸಂಖ್ಯಾತ ಸಮುದಾಯಗಳ ಕುರಿತು ಸೂಕ್ತ ಹಾಗೂ ಸಂಪೂರ್ಣ ಮಾಹಿತಿ ಇಲ್ಲದಿದ್ದರೆ ಅವುಗಳಿಗೆ ಹಣ ಮೀಸಲಿಡಲು ಮತ್ತು ಬಜೆಟ್‌ನಲ್ಲಿ ರೂಪಿಸಿದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ’ ಎಂದು ವಿವರಿಸಲಾಗಿದೆ.

ಆಕ್ಷೇಪ ಏನು?: ‘ಅಲ್ಪಸಂಖ್ಯಾತರ ಇಲಾಖೆ 2021ರ ಜುಲೈ 7ರಂದು ಹೊರಡಿಸಿರುವ ಸುತ್ತೋಲೆ ಅರ್ಥಹೀನವಾಗಿದ್ದು, ತಾರತಮ್ಯದಿಂದ ಕೂಡಿದೆ’ ಎಂಬುದು ಅರ್ಜಿದಾರರ ಆಕ್ಷೇಪ.

‘ಸಮೀಕ್ಷೆಯಲ್ಲಿ ಚರ್ಚ್‌ಗಳು ಇರುವ ಸ್ಥಳ, ತಾಲ್ಲೂಕು, ಜಿಲ್ಲೆ ಹಾಗೂ ಅವುಗಳ ವಿಧಾನಸಭಾ ಕೇತ್ರದ ವ್ಯಾಪ್ತಿಯ ದತ್ತಾಂಶಗಳು ಮತ್ತು ಚರ್ಚ್‌ಗಳ ಹೆಸರು, ವಿಳಾಸ, ಖಾತೆ ಸಂಖ್ಯೆ, ಸರ್ವೇ ಸಂಖ್ಯೆ ಹಾಗೂ ಪಾದ್ರಿಗಳ ವಿವರಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಆ ಮೂಲಕ ಧರ್ಮದ ಆಧಾರದಲ್ಲಿ ಕ್ರೈಸ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಇದು ಕ್ರೈಸ್ತರ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದ್ದು, ಈ ಸುತ್ತೋಲೆಯನ್ನು ರದ್ದುಪಡಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.