ADVERTISEMENT

ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ: ಎಚ್‌ಎಸ್‌ವಿ ಸೇರಿ ನಾಲ್ವರಿಗೆ ಪ್ರಶಸ್ತಿ

ಆನೇಕಲ್‌ನಲ್ಲಿ ಮಾ. 11ರಿಂದ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 6:56 IST
Last Updated 28 ಫೆಬ್ರುವರಿ 2023, 6:56 IST
ಎಚ್‌ಎಸ್‌ವಿ
ಎಚ್‌ಎಸ್‌ವಿ   

ಬೆಂಗಳೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಾರ್ಚ್‌ 11 ಮತ್ತು 12ರಂದು 18ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನವನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನ (ಅತ್ತಿಬೆಲೆ ರಸ್ತೆ) ಸರ್ಕಾರಿ ಹೊಸ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

‘ಸಮ್ಮೇಳನದ ಗೀತೋತ್ಸವದಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 10ರ ತನಕ ಎರಡು ದಿನವೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮ್ಯಾಂಡೋಲಿನ್ ವಾದಕ ಎನ್‌.ಎಸ್‌.ಪ್ರಸಾದ್‌ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ’ ಎಂದು ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

‘2003ರಲ್ಲಿ ಪರಿಷತ್ತು ಸ್ಥಾಪನೆಯಾಗಿದ್ದು, ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಒಟ್ಟು 17 ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಆನೇಕಲ್‌ನಲ್ಲಿ ನಡೆಯುವ ಈ ಬಾರಿಯ ಸಮ್ಮೇಳನದಲ್ಲಿ ಸುಗಮ ಸಂಗೀತ ಕಲಾವಿದರು ಹಾಗೂ ಕವಿಗಳು ಭಾಗವಹಿಸಲಿದ್ದಾರೆ. ಕವಿ ದೊಡ್ಡರಂಗೇಗೌಡ ಸಮ್ಮೇಳನ ಉದ್ಘಾಟಿಸಲಿದ್ದಾರೆ’ ಎಂದರು.

ADVERTISEMENT

ನಾಲ್ವರಿಗೆ ಪ್ರಶಸ್ತಿ: ‘2021ನೇ ಸಾಲಿನ ‘ಕಾವ್ಯಶ್ರೀ ಪ್ರಶಸ್ತಿ’ಯನ್ನು ಕವಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ, ‘ಭಾವಶ್ರೀ ಪ್ರಶಸ್ತಿ’ಯನ್ನು ಪುತ್ತೂರು ನರಸಿಂಹ ನಾಯಕ್‌, 2022ನೇ ಸಾಲಿನ ‘ಕಾವ್ಯಶ್ರೀ ಪ್ರಶಸ್ತಿ’ಯನ್ನು ಕವಿ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, ‘ಭಾವಶ್ರೀ ಪ್ರಶಸ್ತಿ’ಯನ್ನು ಗಾಯಕಿ ಡಾ.ರೋಹಿಣಿ ಮೋಹನ್‌ ಅವರಿಗೆ ಮಾರ್ಚ್ 12ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪತ್ರ, ಫಲಕ ಹಾಗೂ ₹ 10 ಸಾವಿರ ನಗದು ಒಳಗೊಂಡಿದೆ. ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕವಿ ಬಿ.ಆರ್‌.ಲಕ್ಷ್ಮಣರಾವ್‌, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಗರ ಶ್ರೀನಿವಾಸ ಉಡುಪ, ಕಾರ್ಯಾಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಹಾಜರಿದ್ದರು.

ಗಾಯಕಿ ಕೆ.ಎಸ್. ಚಿತ್ರಾ, ಡಾ.ಸಿ.ಆರ್.ಚಂದ್ರಶೇಖರ್‌ಗೆ ರಾಷ್ಟ್ರೀಯ ಪುರಸ್ಕಾರ
ಬ್ರಹ್ಮಾವರ (ಉಡುಪಿ):
ಕೋಟದ ಮನಸ್ಮಿತ ಫೌಂಡೇಶನ್ ಹಾಗೂ ಮಣೂರಿನ ಗೀತಾನಂದ ಫೌಂಡೇಶನ್ ಹಾಗೂ ಯುವ ಮೆರಿಡಿಯನ್ ಸಹಭಾಗಿತ್ವದಲ್ಲಿ ನೀಡಲಾಗುವ ಡಾ.ಎಸ್.ಜಾನಕಿ ರಾಷ್ಟ್ರೀಯ ಪ್ರಶಸ್ತಿ –2023ಗೆ ಪ್ರಸಿದ್ಧ ಗಾಯಕಿ ಕೆ.ಎಸ್.ಚಿತ್ರಾ, ಮನಸ್ಮಿತ ರಾಷ್ಟ್ರೀಯ ಪುರಸ್ಕಾರಕ್ಕೆ ಮನೋವೈದ್ಯ, ಸಾಹಿತಿ ಡಾ.ಸಿ.ಆರ್. ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ.

ಎಸ್.ಜಾನಕಿ ರಾಷ್ಟ್ರೀಯ ಪುರಸ್ಕಾರ ₹1ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ, ಮನಸ್ಮಿತ ರಾಷ್ಟ್ರೀಯ ಪುರಸ್ಕಾರ ₹25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಮಾ.24ಕ್ಕೆ ರಂದು ಕೋಟೇಶ್ವರದ ಯುವ ಮೆರಿಡಿಯನ್ ಒಪೆರಾ ಪಾರ್ಕ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಮನಸ್ಮಿತ ಫೌಂಡೇಶನ್ ನಿರ್ದೇಶಕ ಡಾ. ಪ್ರಕಾಶ್ ತೋಳಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.