ADVERTISEMENT

ವಿಶ್ವನಾಥ್‌ ಹೇಳಿಕೆ, ಕಾಂಗ್ರೆಸ್‌ ಮುಖಂಡರ ಪ್ರತಿಕ್ರಿಯೆ; ಪರಮೇಶ್ವರ ಗರಂ

​ಪ್ರಜಾವಾಣಿ ವಾರ್ತೆ
Published 13 ಮೇ 2019, 7:01 IST
Last Updated 13 ಮೇ 2019, 7:01 IST
ಜಿ.ಪರಮೇಶ್ವರ ಹಾಗೂ ಎಚ್. ವಿಶ್ವನಾಥ್
ಜಿ.ಪರಮೇಶ್ವರ ಹಾಗೂ ಎಚ್. ವಿಶ್ವನಾಥ್   

ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಕುರಿತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ವಿಶ್ವನಾಥ್ ಅವರು ನೀಡಿದ್ದ ಹೇಳಿಕೆಗೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಬೇಸರ ವ್ಯಕ್ತಪಡಿಸಿದ್ದಾರೆ.

ಸದಾಶಿವನಗರದ ಸರ್ಕಾರಿ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

‘ರಾಜಕೀಯವಾಗಿ ನಾವು ಮೈತ್ರಿ ಸರ್ಕಾರ ನಡೆಸುತ್ತಿದ್ದೇವೆ. ಆ ಪಕ್ಷದ ಅಧ್ಯಕ್ಷರಾಗಿ ಸಮನ್ವಯ ಸಮಿತಿ ಅಧ್ಯಕ್ಷರ ಬಗ್ಗೆ ಲಘುವಾಗಿ ಮಾತನಾಡಿದ್ದು ಸರಿಯಲ್ಲ. ವಿಶ್ವನಾಥ್ ಅವರು ಜನತಾದಳದ ಅಧ್ಯಕ್ಷರಾಗಿದ್ದಾರೆ. ಇಂತಹ ಹೇಳಿಕೆಯು ಪುನರಾವರ್ತನೆ ಆಗಬಾರದು. ನಾಲ್ಕು ವರ್ಷ ಮೈತ್ರಿ ಮುಂದುವರಿಯಬೇಕಿದೆ. ಹೀಗಾಗಿ ಗೊಂದಲದ ಹೇಳಿಕೆಗಳನ್ನ ಮುಂದುವರೆಸಬಾರದು’ ಎಂದು ಹೇಳಿದರು.

‘ಆಂತರಿಕ ಭಿನ್ನಾಭಿಪ್ರಾಯ ಇದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಇಲ್ಲವೇ ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಬಹುದು. ಮೊದಲು ವಿಶ್ವನಾಥ್‌ರಿಂದ ಕ್ರಿಯೆ ಆಗಿದೆ, ಆದಕ್ಕೆ ಪ್ರತಿಕ್ರಿಯೆ ಕಾಂಗ್ರೆಸ್‌ನವರಿಂದ ಆಗಿದೆ. ಅವರಿಗೆ ಹಾಗೂ ಸಿದ್ದರಾಮಯ್ಯಗೆ ವೈಯಕ್ತಿಕ ಭಿನ್ನಾಭಿಪ್ರಾಯ ಇರಬಹುದು. ಎರಡೂ ಕಡೆಗಳಿಂದ ಆಗಬಾರದು. ನಮ್ಮಲ್ಲೂ ಹೇಳಿಕೆ ನೀಡುವುದು ತಪ್ಪು’ ಎಂದರು.

ಕಷ್ಟ ಆದರೆ ಅವರ ದಾರಿ ಅವರು ನೋಡಿಕೊಳ್ಳಲಿ ಎಂಬ ಜೆಡಿಎಸ್ ಮುಖಂಡ ಕುಪೇಂದ್ರ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ‘ಕುಪೇಂದ್ರ ರೆಡ್ಡಿ ಬಳಿ ನಾವು ಮೈತ್ರಿ ಮಾಡಿಕೊಂಡಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಜೊತೆ ಒಪ್ಪಂದ ಆಗಿರೋದು’ ಎಂದು ಕಿಡಿಕಾರಿದರು.

ಈ ಎಲ್ಲ ಬೆಳವಣಿಗೆಗಳ ನಡುವೆ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯಾಕೆ ಮೌನವಾಗಿದ್ದಾರೋ ಗೊತ್ತಿಲ್ಲ. ಅವರ ಲೆಕ್ಕಾಚಾರ ನನಗೇನು ಗೊತ್ತು ಎಂದರು.

ಮೇ. 23ಕ್ಕೆ ಬಿಜೆಪಿ ಡೆಡ್ ಲೈನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ಜಪ ಮಾಡುತ್ತಿದ್ದಾರೆ. ಅವರಿಗೆ ಜಪ ಮಾಡೋಕೆ ಯಾಕೆ ತೊಂದರೆ ಕೊಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.