ADVERTISEMENT

ಬೆಂಬಲ ಬೆಲೆಯಡಿ ಧಾನ್ಯಗಳ ಖರೀದಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 8:21 IST
Last Updated 8 ಡಿಸೆಂಬರ್ 2020, 8:21 IST

ಬೆಂಗಳೂರು: ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಮೆಕ್ಕೆ ಜೋಳ, ತೊಗರಿ, ಶೇಂಗಾ, ಉದ್ದು ಮತ್ತು ಹೆಸರು ಖರೀದಿಸಲು ತೀರ್ಮಾನಿಸಿದೆ.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೇಂದ್ರ ಸರ್ಕಾರ 2020–21 ನೇ ಸಾಲಿಗೆ 1.10 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿಗೆ ಅನುಮತಿ ನೀಡಿದೆ. ರಾಜ್ಯವು ಇನ್ನೂ 1 ಲಕ್ಷ ಮೆಟ್ರಿಕ್‌ ಟನ್‌ ಹೆಚ್ಚುವರಿ ಭತ್ತ ಖರೀದಿಗೆ ನಿರ್ಧರಿಸಿದೆ. ಇದರಿಂದ ಒಟ್ಟು 2.10 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ADVERTISEMENT

ಭತ್ತ ಖರೀದಿಗಾಗಿ ಈಗಾಗಲೇ ನೋಂದಣಿ ಆರಂಭವಾಗಿದೆ. ತಕ್ಷಣವೇ ಭತ್ತ ಖರೀದಿ ಆರಂಭಿಸಲಾಗುವುದು. ಜನವರಿ ಕೊನೆಯವರೆಗೂ ರೈತರು ನೋಂದಣಿ ಮಾಡಿಸಬಹುದಾಗಿದೆ. ಭತ್ತ ಖರೀದಿ ಪ್ರತಿ ರೈತರಿಂದ ಎಕರೆಗೆ 25 ಕ್ವಿಂಟಲ್‌ನಂತೆ ಗರಿಷ್ಠ 75 ಕ್ವಿಂಟಲ್‌ ಖರೀದಿಸಲಾಗುವುದು ಎಂದು ಅವರು ಹೇಳಿದ್ದಾರೆ.

ರಾಗಿ ಮತ್ತು ಬಿಳಿಜೋಳವನ್ನು ಇದೇ 15 ರಿಂದ ಖರೀದಿ ಆರಂಭಿಸಲಾಗುವುದು. ರಾಗಿ ಪ್ರತಿ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್‌ ಖರೀದಿಸಲಾಗುವುದು. ಈ ಬಾರಿ 4 ಲಕ್ಷ ಮೆಟ್ರಿಕ್ ಟನ್‌ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಳಿ ಜೋಳ ಪ್ರತಿ ಎಕರೆಗೆ 15 ಕ್ವಿಂಟಲ್‌ನಂತೆ ಗರಿಷ್ಠ 75 ಕ್ವಿಂಟಲ್‌ ಖರೀದಿಸಲಾಗುವುದು ಎಂದರು.

ತೊಗರಿ ಖರೀದಿಗೆ ನೋಂದಣಿ ಇದೇ 15 ರಿಂದ ಆರಂಭವಾಗಲಿದೆ. ಜನವರಿ 1 ರಿಂದ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಖರೀದಿ ಅವಧಿ 90 ದಿನಗಳಾಗಿದ್ದು, ಪ್ರತಿ ಎಕರೆಗೆ ಗರಿಷ್ಠ 7.5 ಕ್ವಿಂಟಲ್‌, ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಲ್‌ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.