ADVERTISEMENT

ಕೆಎಸ್‌ಎಸ್‌ಐಡಿಸಿ ಲಾ‌ಭ ದ್ವಿಗುಣ

​ಪ್ರಜಾವಾಣಿ ವಾರ್ತೆ
Published 27 ಜುಲೈ 2023, 20:11 IST
Last Updated 27 ಜುಲೈ 2023, 20:11 IST

ಬೆಂಗಳೂರು: ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (ಕೆಎಸ್‌ಎಸ್‌ಐಡಿಸಿ) ಲಾಭ 2022–23ನೇ ಸಾಲಿನಲ್ಲಿ ದ್ವಿಗುಣಗೊಂಡಿದೆ.

2021–22ನೇ ಸಾಲಿನಲ್ಲಿ ₹25.98 ಕೋಟಿ ಲಾಭ ಗಳಿಸಿದ್ದ ನಿಗಮ, ಕಳೆದ ಆರ್ಥಿಕ ಸಾಲಿನಲ್ಲಿ ₹49.04 ಕೋಟಿ ಲಾಭ ಗಳಿಸಿದೆ. ಕೈಗಾರಿಕಾ ನಿವೇಶನಗಳ ಕ್ರಯಪತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಣೆ ಮಾಡಿರುವುದು ಈ ಸಾಲಿನ ಸಾಧನೆಯಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್‌.ಜೆ. ಸೋಮಶೇಖರ್‌ ತಿಳಿಸಿದ್ದಾರೆ.

ಕೋವಿಡ್‌ ಹಾಗೂ ಆರ್ಥಿಕ ಹಿಂಜರಿತದಿಂದ ಎರಡು–ಮೂರು ವರ್ಷ ಉತ್ಪಾದನೆ ವಲಯಕ್ಕೆ ಬೇಡಿಕೆ ತಗ್ಗಿತ್ತು. ಆದ್ದರಿಂದ, ನವೋದ್ಯಮಿಗಳು ನಿಗದಿತ ಅವಧಿಯಲ್ಲಿ ಕೈಗಾರಿಕೆ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ. ಕ್ರಯಪತ್ರ ವಿತರಣೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿದ್ದವು. ಅವುಗಳನ್ನು ನಿವಾರಿಸಿಕೊಂಡು ನವೋದ್ಯಮಿಗಳಿಗೆ ವಿತರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ನವೋದ್ಯಮಿಗಳಿಗೆ ಹೆಚ್ಚಿನ ಅವಕಾಶ ನೀಡಿ, ಪ್ರೋತ್ಸಾಹಿಸುವ ಉದ್ದೇಶದಿಂದ ಕೈಗಾರಿಕಾ ಪುನರ್‌ಸ್ಥಾಪನೆ ನಿಯಮ ಜಾರಿಗೆ ತರಲಾಗಿದೆ. ಕನಿಷ್ಠ ದಂಡವನ್ನು ವಿಧಿಸಿ, ಕೈಗಾರಿಕೆಗಳ ಸ್ಥಾಪನೆಗೆ ಮತ್ತಷ್ಟು ಕಾಲಾವಕಾಶ ಒದಗಿಸಲಾಗಿದೆ. ಇದರಿಂದ ಉದ್ಯಮಿಗಳಿಗೂ ಅನುಕೂಲವಾಗಿದೆ, ಸಂಸ್ಥೆಗೂ ಲಾಭವಾಗಿದೆ. ಸಂಸ್ಥೆಯಲ್ಲಿ ಆರ್ಥಿಕ ಶಿಸ್ತು ತರಲಾಗಿದ್ದು, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿದ್ದರಿಂದ 2022-23ನೇ ಸಾಲಿನಲ್ಲಿ ಲಾಭಾಂಶದ ಹೆಚ್ಚಳವಾಗಲು ಕಾರಣವಾಗಿದೆ ಎಂದು ವಿವರಿಸಿದ್ದಾರೆ.

ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ನಿಗಮವು ಐದು ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸುತ್ತಿದೆ ಎಂದು ಸೋಮಶೇಖರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.