ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಅನುಷ್ಠಾನಗೊಳಿಸುತ್ತಿರುವ ₹ 8,005 ಕೋಟಿ ವೆಚ್ಚದ ‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿ ಷರತ್ತು ಬದ್ಧ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮಂಡಳಿಯ ಸಭೆ ಮಂಗಳವಾರ ನಡೆಯಿತು.
‘ಯೋಜನೆಗೆ ಸಂಬಂಧಿಸಿದಂತೆ ಇನ್ನಷ್ಟು ವಿವರಣೆ ಪಡೆಯಬೇಕು. ಈಗಿನ ಪ್ರಸ್ತಾವದಲ್ಲಿ, ವಿದ್ಯುತ್ ಮಾರ್ಗ ನಿರ್ಮಾಣದ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲ. ಹೀಗಾಗಿ, ಉತ್ಪಾದನೆಯಾಗುವ ವಿದ್ಯುತ್ ಅನ್ನು ಹೇಗೆ ಸರಬರಾಜು ಮಾಡಲಾಗುತ್ತದೆ ಎಂಬ ವಿವರಣೆ ನೀಡಬೇಕು. ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಬೇಕು. ಈಗಿರುವ ಸುರಂಗವನ್ನೇ ಕೊರೆದು ದೊಡ್ಡದು ಮಾಡುವ ಮೂಲಕ ಮರಗಳಿಗೆ ಯಾವುದೇ ಆಪತ್ತು ಉಂಟಾಗದಂತೆ ನೋಡಿಕೊಳ್ಳಬೇಕು ಎಂಬ ಷರತ್ತಿನ ಮೇಲೆ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ’ ಎಂದು ಮೂಲಗಳು ಹೇಳಿವೆ.
ಶರಾವತಿ ವನ್ಯಜೀವಿಧಾಮ ವ್ಯಾಪ್ತಿಯ ಶಿವಮೊಗ್ಗ, ಸಾಗರ ಹಾಗೂ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಸಿಎಫ್) 134 ಎಕರೆ ಕಾಡು ಬಳಸುವ ಈ ಯೋಜನೆಯ ಸ್ಥಳ ಪರಿಶೀಲನೆ ನಡೆಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ (ಪಿಸಿಸಿಎಫ್) ವಿಸ್ತೃತ ವರದಿ ಸಲ್ಲಿಸಿದ್ದರು.
ಈ ಯೋಜನೆಯ ಯೋಜನೆಯಿಂದ ಪ್ರತಿಕೂಲ ಪರಿಣಾಮಗಳ ಬಗ್ಗೆ ಮೂವರು ಡಿಸಿಎಫ್‌ಗಳು ವಿವರಿಸಿದ್ದರು. ಆದರೂ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಆ ನಂತರ ಡಿಸಿಎಫ್‌ಗಳು ಯೋಜನೆಯ ಪರವಾಗಿ ಶಿಫಾರಸು ಮಾಡಿದ್ದಾರೆ. ಜತೆಗೆ, ಯೋಜನೆಯಿಂದ ಪಶ್ಚಿಮ ಘಟ್ಟದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಸುದೀರ್ಘ ಟಿಪ್ಪಣಿ ಬರೆದಿದ್ದರು.
ಮಂಡಳಿಯ ಉಪಾಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಸದಸ್ಯರು ಸಭೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.