ADVERTISEMENT

ಡಾ.ಅನಿತಾ ವಿರುದ್ಧದ ವಿಚಾರಣೆಗೆ ತಡೆ

ಶಶಿಕಲಾಗೆ ಜೈಲಿನಲ್ಲಿ ಐಷಾರಾಮಿ ವ್ಯವಸ್ಥೆ ಆರೋಪ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 16:45 IST
Last Updated 2 ಫೆಬ್ರುವರಿ 2022, 16:45 IST

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿದ್ದ ವೇಳೆ ತಮಿಳುನಾಡಿನ ರಾಜಕಾರಣಿ ಶಶಿಕಲಾ ನಟರಾಜನ್‌ಗೆ ಐಷಾರಾಮಿ ವ್ಯವಸ್ಥೆ ಮತ್ತು ಆತಿಥ್ಯ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾರಾಗೃಹ ಅಕಾಡೆಮಿ ಉಪನಿರ್ದೇಶಕಿ ಡಾ. ಅನಿತಾ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

’ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಉಪನಿರ್ದೇಶಕಿ ಡಾ. ಅನಿತಾ ಆರ್. ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

’ತನಿಖೆಯ ಆದೇಶ ಪ್ರಶ್ನಿಸಿ ಅರ್ಜಿದಾರರು 2018ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮಾನ್ಯ ಮಾಡಿ, ಅರ್ಜಿದಾರರ ವಿರುದ್ಧದ ತನಿಖೆ ರದ್ದುಪಡಿಸಿದೆ. ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿಲ್ಲ. ದೋಷಾರೋಪಣೆ ‍ಪಟ್ಟಿಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಎಚ್‌.ಎನ್‌. ಸತ್ಯನಾರಾಯಣ ರಾವ್‌ ಅವರ ವಿರುದ್ಧ ಮಾತ್ರವೇ ಆರೋಪಗಳಿವೆ. ಅನಿತಾ ಅವರ ವಿರುದ್ಧ ಆರೋಪಗಳಿಲ್ಲ. ಹಾಗಿದ್ದೂ, ಅನಿತಾ ಅವರ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ 2021ರ ಡಿಸೆಂಬರ್ 30ರಂದು ಆದೇಶ ಹೊರಡಿಸಲಾಗಿದೆ. ಆದ್ದರಿಂದ, ಅರ್ಜಿದಾರರ ಕೋರಿಕೆಯಂತೆ ಮುಂದಿನ ವಿಚಾರಣೆವರೆಗೆ ವಿಚಾರಣೆಯ ಆದೇಶಕ್ಕೆ ತಡೆ ನೀಡಲಾಗಿದೆ‘ ಎಂದು ನ್ಯಾಯಪೀಠ ತಿಳಿಸಿದೆ.

ADVERTISEMENT

ತಮ್ಮ ವಿರುದ್ಧ ತನಿಖೆಗೆ ಆದೇಶಿಸಿದ ಕ್ರಮವನ್ನು ಪ್ರಶ್ನಿಸಿ ಡಾ.ಅನಿತಾ ಕರ್ನಾಟಕ ಆಡಳಿತ ಮಂಡಳಿ (ಕೆಎಟಿ) ಮೊರೆ ಹೋಗಿದ್ದರು. ಕೆಎಟಿ ಈ ಅರ್ಜಿಯನ್ನು ಮಾನ್ಯ ಮಾಡಿತ್ತು. ಇತ್ತೀಚೆಗೆ ಆರೋಪಿಗಳ ವಿರುದ್ಧವಿಚಾರಣೆಗೆ ಅನುಮತಿ ನೀಡಿ ಆದೇಶ ಹೊರಡಿಸುವ ವೇಳೆ ಡಾ. ಅನಿತಾರ ಹೆಸರನ್ನೂ ಸೇರ್ಪಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆದೇಶ ರದ್ದು ಕೋರಿ ಡಾ. ಅನಿತಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.