ADVERTISEMENT

ಪರಿಸರ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಕೈಗಾರಿಕೆಗಳಿಗೆ ಯೋಗೇಶ್ವರ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 21:52 IST
Last Updated 1 ಜುಲೈ 2021, 21:52 IST
CP Yogeshwar
CP Yogeshwar   

ಬೆಂಗಳೂರು: ‘ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಗಳನ್ನು ಉಲ್ಲಂಘಿಸುವ ಕೈಗಾರಿಕೆಗಳ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಂಡು, ದಂಡ ವಿಧಿಸಲಾಗುವುದು. ತಪ್ಪಿತಸ್ಥಅಧಿಕಾರಿಗಳ ಮೇಲೆಯೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪರಿಸರ ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ ಎಚ್ಚರಿಕೆ ನೀಡಿದರು.

ಪರಿಸರ ಇಲಾಖೆಯ ಪ್ರಗತಿ ಪರಿ ಶೀಲನಾ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮರಳು, ಕಲ್ಲು, ಗ್ರಾನೈಟ್‌ ಸಾಗಣೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡುತ್ತಿರುವ ಪರವಾನಗಿ ಮಾದರಿಯಲ್ಲಿ, ತ್ಯಾಜ್ಯ ವಿಲೇವಾರಿಗೆ ನಿಖರವಾಗಿ ತೂಕ ಮಾಡಿ ಪರವಾನಗಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದು ತಿಳಿಸಿದರು.

ಮುಂದಿನ ವಾರ ಪರಿಶೀಲನೆ: ‘ವಿವಿಧೆಡೆ ಕೈಗಾರಿಕೆಗಳು ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸದೆ, ನದಿ- ಕೆರೆ ಸೇರಿದಂತೆ ಜಲಮೂಲಗಳಿಗೆ ನೇರವಾಗಿ ಹಾಕುತ್ತಿರುವುದು ಮತ್ತು ಖಾಲಿ ಜಮೀನುಗಳಲ್ಲಿ ತುಂಬುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ, ಮುಂದಿನ ವಾರದಿಂದ ಕೈಗಾರಿಕಾ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ‌ಪರಿಶೀಲಿಸುತ್ತೇನೆ’ ಎಂದರು.

ADVERTISEMENT

‘ಕೆ.ಸಿ ವ್ಯಾಲಿ ಯೋಜನೆಯಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 129 ಕೆರೆಗಳನ್ನು ತುಂಬಿಸುವ ಕಾರ್ಯ ಪ್ರಗತಿಯಲ್ಲಿದ್ದು, 84 ಕೆರೆಗಳನ್ನು ತುಂಬಿಸಲಾಗಿದೆ. ಆದರೆ, ಮೊದಲ ಹಾಗೂ ಎರಡನೇ ಹಂತದಲ್ಲಿ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸದೇ ಕೆರೆಗಳನ್ನು ತುಂಬಿಸಿರುವುದರಿಂದ ಆ ಭಾಗದ ಅಂತರ್ಜಲ ವಿಷವಾಗಿ ಬದಲಾಗಿದೆ. ಮೂರನೇ ಹಂತದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ನೀರು ತುಂಬಿಸಲಾಗುವುದು’ ಎಂದು ಸಚಿವರು ಸೂಚಿಸಿದರು.

‘ಇಸ್ರೇಲ್‍ ತಂತ್ರಜ್ಞಾನ ಬಳಸಿ ತ್ಯಾಜ್ಯ ನೀರು ಸಂಸ್ಕರಿಸಿದರೆ ನೀರಿನ ಗುಣಮಟ್ಟ ಉತ್ತಮವಾಗಲಿದ್ದು, ಕೃಷಿಗೆ ಬಳಸಬಹುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದೂ ಅಧಿಕಾರಿಗಳಿಗೆ ಯೋಗೀಶ್ವರ್ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.