ADVERTISEMENT

‘ನಮ್ಮ ಶಾಲೆ’ಯಲ್ಲಿ ಮಕ್ಕಳಿಂದಲೇ ಪಾಠ

ಕೊಳೆಗೇರಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹಿರಿಯ ವಿದ್ಯಾರ್ಥಿಗಳಿಗೆ ಬೊಸ್ಕೊದಿಂದ ತರಬೇತಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 19:29 IST
Last Updated 7 ನವೆಂಬರ್ 2020, 19:29 IST
ಕೊಳೆಗೇರಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ವಿದ್ಯಾರ್ಥಿ
ಕೊಳೆಗೇರಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ವಿದ್ಯಾರ್ಥಿ   

ಬೆಂಗಳೂರು: ಕೊರೊನಾದಿಂದಾಗಿ ಶಾಲೆ ಗಳಿಂದ ದೂರವಾಗಿದ್ದ ನಗರದ ವಿವಿಧ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆ ಅಲ್ಲಿನ ಮಕ್ಕಳಿಂದಲೇ ಪಾಠ ಹೇಳಿಕೊಡುವ‘ನಮ್ಮ ಶಾಲೆ’ ಕಾರ್ಯಕ್ರಮವನ್ನು ಬೆಂಗಳೂರು ಓಣಿಯವರ ಸೇವಾ ಕೂಟ (ಬೋಸ್ಕೊ) ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಡಿ ಕೊಳೆಗೇರಿಯ ಹಿರಿಯ ವಿದ್ಯಾರ್ಥಿಯೊಬ್ಬರನ್ನು ಆಯ್ಕೆ ಮಾಡಿ, ಅವರಿಗೆ ಬೋಸ್ಕೊ ವತಿಯಿಂದ ಬೋಧನಾ ತರಬೇತಿ ನೀಡಲಾಗುತ್ತಿದೆ. ತನ್ನ ಕೊಳೆಗೇರಿಯಲ್ಲಿರುವ ಎಲ್ಲ ಮಕ್ಕಳಿಗೆ ಗಣಿತ, ಕನ್ನಡ, ಆರೋಗ್ಯ ಕಾಪಾಡುವಿಕೆ ಕುರಿತ ವಿಷಯಗಳ ಬೋಧನೆ ಮಾಡುವ ಮಟ್ಟಿಗೆ ಹೀಗೇ ಆಯ್ಕೆ ಮಾಡಲಾದ ವಿದ್ಯಾರ್ಥಿಯನ್ನು ಸಜ್ಜುಗೊಳಿಸಿದೆ.

‘ಶಾಲೆಗಳು ಮುಚ್ಚಿರುವುದರಿಂದ ಕೊಳೆಗೇರಿಗಳ ವಿದ್ಯಾರ್ಥಿಗಳು ವಿವಿಧ ಕೆಲಸಗಳತ್ತ ಮುಖ ಮಾಡುತ್ತಾರೆ. ಇದರಿಂದ ಬಾಲಕಾರ್ಮಿಕರು ಹೆಚ್ಚಾಗು ತ್ತಾರೆ. ಹಾಗಾಗಿ, ಈ ಕಾರ್ಯಕ್ರಮದ ಮೂಲಕ ಶಾಲೆಯನ್ನು ವಿದ್ಯಾರ್ಥಿಗಳ ಸಮೀಪವೇ ತಂದಿದ್ದೇವೆ’ ಎಂದು ಬೋಸ್ಕೊ ಕಾರ್ಯನಿರ್ವಾಹಕ ನಿರ್ದೇಶಕ ಫಾ.ಮ್ಯಾಥ್ಯೂ ಥಾಮಸ್ ತಿಳಿಸಿದರು.

ADVERTISEMENT

‘ಇದಕ್ಕಾಗಿ ಲಾಕ್‍ಡೌನ್ ಅವಧಿ ಯಿಂದಲೂ ಬೆಂಗಳೂರಿನಾದ್ಯಂತ 21 ಕೊಳೆಗೇರಿಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪ್ರತಿ ಕೊಳೆಗೇರಿಯಿಂದ ಇಬ್ಬರನ್ನು ಆಯ್ಕೆ ಮಾಡಿದ್ದು, ಒಟ್ಟು 42 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ವಿರುವ ಪರಿಕರಗಳನ್ನು ವಿತರಿಸಲಾಗಿದೆ. ಮಕ್ಕಳ ಆರೋಗ್ಯ ದೃಷಿಯಿಂದ ಮಾಸ್ಕ್‌ ಗಳನ್ನೂ ಒದಗಿಸಿದ್ದೇವೆ. ಸೋಂಕು ಹರಡದಂತೆ ತಡೆಯಲು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆ. ಶಾಲೆಗಳು ಆರಂಭವಾಗುವ ವರೆಗೂ ಈ ಕಾರ್ಯಕ್ರಮವನ್ನು ಮುಂದುವರಿಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ನಮ್ಮಶಾಲೆ?: ಚನ್ನಸಂದ್ರ, ನಾಗರಬಾವಿ, ವೀರಭದ್ರನಗರ, ಚೊಕ್ಕಸಂದ್ರ, ಶಿರ್ಕೆ ವೃತ್ತ, ಗಾಂಧಿನಗರ, ಮಲ್ಲತ್ತಹಳ್ಳಿ, ಪೀಣ್ಯ, ನಂದಿನಿ ಬಡಾವಣೆ, ಬ್ಯಾಟರಾಯನಪುರ, ಬೈರಪ್ಪ ಬಡಾವಣೆ, ಕೃಷ್ಣ ಬಡಾವಣೆ ಹಾಗೂ ಹಲವು ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.