ಬೆಂಗಳೂರು: ಕಳಪೆ ಗುಣಮಟ್ಟದ ಔಷಧಿಗಳನ್ನು ಖರೀದಿಸಿ, ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳ ರೋಗಿಗಳಿಗೆ ವಿತರಿಸಿರುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದ್ದು, ಈ ಬಗ್ಗೆ ಮಹಾಲೇಖಪಾಲರ (ಸಿಎಜಿ) ವರದಿ ಆಕ್ಷೇಪ ವ್ಯಕ್ತಪಡಿಸಿದೆ.
ಕರ್ನಾಟಕ ಲಾಜಿಸ್ಟಿಕ್ ಮತ್ತು ವೇರ್‌ಹೌಸಿಂಗ್ ಸೊಸೈಟಿಯು 2014– 15ರಿಂದ 2016– 17ರವರೆಗೆ ಮೂರು ವರ್ಷಗಳ ಅವಧಿಗೆ 14,209 ಬ್ಯಾಚ್‌ಗಳಲ್ಲಿ 1,110 ವಿಧದ ಔಷಧಿಗಳನ್ನು ₹ 535.22 ಕೋಟಿ ಪಾವತಿಸಿ, ಖರೀದಿಸಿತ್ತು. ಇದರಲ್ಲಿ 7,433 ಬ್ಯಾಚ್‌ಗಳಲ್ಲಿ ಬಂದಿದ್ದ ಔಷಧಿಗಳ ಗುಣಮಟ್ಟವನ್ನು ಪರಿಶೀಲಿಸದೆ ರೋಗಿಗಳಿಗೆ ಕೊಡಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.
ಔಷಧಿಗಳ ಖರೀದಿ ಹಂತದಲ್ಲಿ ಇಲ್ಲವೆ ಬಳಕೆಯ ವೇಳೆಗುಣಮಟ್ಟ ಖಾತರಿಪಡಿಸಿಕೊಳ್ಳಲು ಕೆಲವು ಆಯ್ದ ಔಷಧಿಗಳನ್ನು ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಬೇಕು. ಅದರಂತೆ, ಪ್ರತಿ ಬ್ಯಾಚ್‌ಗಳಲ್ಲಿ ಬಂದ ಔಷಧಿಗಳನ್ನು ಆಯ್ದು ಪರಿಶೀಲಿಸಬೇಕು. ಆದರೆ, ಕೇವಲ 6,776 ಬ್ಯಾಚ್‌ಗಳ (ಶೇ 48) ಔಷಧಿಗಳನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಇದೇ ಅವಧಿಯಲ್ಲಿ ರಾಜ್ಯದ ಡ್ರಗ್ಸ್ ಕಂಟ್ರೋಲರ್, ‘ಸೊಸೈಟಿ ವೇರ್‌ಹೌಸ್‌ಗಳಿಂದ ಆಯ್ದು ಪರೀಕ್ಷೆಗೆ ಕಳುಹಿಸಿದ್ದ 77 ಬ್ಯಾಚ್ ಔಷಧಿಗಳು ಕಳಪೆಯಾಗಿವೆ ಎಂದು ಘೋಷಿಸಿದ್ದರು. ಈ ಔಷಧಿಗಳ ಒಟ್ಟು ಮೌಲ್ಯ ₹ 4.08 ಕೋಟಿ. ಇವುಗಳಲ್ಲಿ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ, ಗುಣಮಟ್ಟದ್ದು ಎಂದು ಪ್ರಮಾಣೀಕರಿಸಿದ್ದ ₹ 56 ಲಕ್ಷದ 19 ಬ್ಯಾಚ್ ಔಷಧಿಗಳೂ ಸೇರಿದ್ದವು’ ಎಂಬುದು ಗಮನಾರ್ಹ.
ಔಷಧಿಗಳು ಕಳಪೆಯವು ಎಂದು ಖಚಿತವಾದ ಬಳಿಕವೂ ವೇರ್‌ಹೌಸಿಂಗ್ ಸೊಸೈಟಿ ಮತ್ತು ಆಸ್ಪತ್ರೆಗಳಿಗೆ ಮಾಹಿತಿ ನೀಡುವುದಕ್ಕೆ ಅನಗತ್ಯ ವಿಳಂಬ ಮಾಡಲಾಗಿತ್ತು. 50 ಪ್ರಕರಣಗಳಲ್ಲಿ, ಕನಿಷ್ಠ ಎಂಟರಿಂದ ನೂರಕ್ಕೂ ಹೆಚ್ಚು ದಿನಗಳವರೆಗೆ ಮಾಹಿತಿಯನ್ನು ತಡೆ ಹಿಡಿಯಲಾಗಿತ್ತು. ಯಾವುದೇ ಔಷಧಿ ಕಳಪೆ ಎಂದು ರುಜುವಾತು ಆದ ಮಾಹಿತಿ ದೊರೆತ 30 ದಿನಗಳ ಒಳಗಾಗಿ ಇಡೀ ಬ್ಯಾಚ್ (ಎಷ್ಟೇ ದಾಸ್ತಾನು ಇದ್ದರೂ) ಔಷಧಿಗಳನ್ನು ಬದಲಾಯಿಸಬೇಕು. ಇದಕ್ಕೆ ತಪ್ಪಿದರೆ ಔಷಧಿ ಪೂರೈಕೆದಾರರು ನೀಡಿರುವ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಒಪ್ಪಂದದಲ್ಲಿ ಅವಕಾಶವಿದೆ.
ಯಾವುದೇ ಕಂಪನಿ ಅಥವಾ ಸಂಸ್ಥೆಯ ಎರಡು ಇಲ್ಲವೆ ಹೆಚ್ಚು ಔಷಧಿಗಳು ಕಳಪೆಯಾಗಿದ್ದಲ್ಲಿ, ಅಂಥ ಕಂಪನಿಗಳು ಕಪ್ಪುಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಹವಾಗಿರುತ್ತವೆ ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.
ಔಷಧಿ ವೇರ್‌ಹೌಸಿಂಗ್ ಸೊಸೈಟಿ, ಬೇರೆ ರಾಜ್ಯ ಅಥವಾ ಕೇಂದ್ರ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿರುವ ಕಂಪನಿಗಳು/ಗುತ್ತಿಗೆದಾರರು ಐದು ವರ್ಷ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹವಾಗಿರುವುದಿಲ್ಲ ಎಂದೂ ಸಿಎಜಿ ಹೇಳಿದೆ.
ಲೋಕಾಯುಕ್ತಕ್ಕೆ ದೂರು
ಕಳಪೆ ಔಷಧಿ ಖರೀದಿಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರಿಗೆ ವಕೀಲ ಕೆ.ವಿ.ಶಿವಾರೆಡ್ಡಿ ದೂರು ನೀಡಿದ್ದಾರೆ.
ಸಿದ್ದರಾಮಯ್ಯನವರ ಸರ್ಕಾರದಲ್ಲಿ ಯು.ಟಿ ಖಾದರ್ ಹಾಗೂ ಕೆ.ಆರ್. ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಈ ಔಷಧಿಗಳನ್ನು ಖರೀದಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಿಎಜಿ 2014ರಿಂದ 2017ರವರೆಗಿನ ಔಷಧಿಗಳ ಖರೀದಿ ವ್ಯವಹಾರ ಕುರಿತು ಪರಿಶೀಲಿಸಿದ್ದು, ರಮೇಶ್ ಕುಮಾರ್ 2016ರ ಜೂನ್‌ನಿಂದ ಆರೋಗ್ಯ ಸಚಿವರಾಗಿದ್ದರು. ಇವರಿಗೂ ಮೊದಲು ಖಾದರ್ ಈ ಇಲಾಖೆ ಜವಾಬ್ದಾರಿ ಹೊತ್ತಿದ್ದರು.
ಈ ಬಗ್ಗೆ ಪ್ರತಿಕ್ರಿಯೆಗೆ ಖಾದರ್ ಸಿಗಲಿಲ್ಲ.
ತನಿಖೆಯಾಗಲಿ: ರಮೇಶ್ ಕುಮಾರ್
‘ಕಳಪೆ ಔಷಧಿ ಖರೀದಿ ಸಂಬಂಧ ನನ್ನ ವಿರುದ್ಧ ದೂರು ನೀಡಿದ್ದರೆ ತನಿಖೆ ಆಗಲಿ. ಲೋಕಾಯುಕ್ತ ನಾವೇ ಹುಟ್ಟುಹಾಕಿರುವ ಸಂಸ್ಥೆ. ಸಾರ್ವಜನಿಕ ಜೀವನದಲ್ಲಿರುವಾಗ, ತನಿಖೆಗೆ ಹೆದರಿ ಓಡಿಹೋಗುವುದಿಲ್ಲ’ ಎಂದು ಕೆ.ಆರ್.ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
‘ನಾನು ಆರೋಗ್ಯ ಸಚಿವನಾಗಿ ನೇಮಕಗೊಂಡ ಬಳಿಕ ಅವಧಿ ಮೀರಿದ ₹ 100 ಕೋಟಿ ಮೌಲ್ಯದ ಔಷಧಿಗಳನ್ನು ನಾಶಪಡಿಸಲು ಸೂಚನೆ ನೀಡಿದ್ದೆ. ಪಾರದರ್ಶಕವಾಗಿ ಔಷಧಿ ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಯಾರು ದೂರು ಕೊಟ್ಟಿದ್ದಾರೊ ಗೊತ್ತಿಲ್ಲ. ಯಾರೇ ಕೊಟ್ಟಿದ್ದರೂ ತನಿಖೆ ಆಗಲಿ. ಸತ್ಯ ಹೊರಬರಲಿ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.